Homekoppalಈಶಾನ್ಯ ಶಿಕ್ಷಕರ ವಿಪ ಕ್ಷೇತ್ರಕ್ಕೆ ಮೂವರ ನಡುವೆ ಪೈಪೋಟಿ

ಈಶಾನ್ಯ ಶಿಕ್ಷಕರ ವಿಪ ಕ್ಷೇತ್ರಕ್ಕೆ ಮೂವರ ನಡುವೆ ಪೈಪೋಟಿ

Spread the love

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅ. ೮ರಂದು ನಾಮಪತ್ರ ಸಲ್ಲಿಕೆ ದಿನ ಅಂತ್ಯವಾಗಿದ್ದು, ಒಟ್ಟು ೮ ಜನರಿಂದ ನಾಮಪತ್ರ ಸಲ್ಲಿಕೆಯಾಗಿವೆ. ಚುನಾವಣಾ ಕಣ ರಂಗೇರಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ.
ಕಳೆದ ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಮತ್ತೊಮ್ಮೆ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಈ ಹಿಂದೆ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಶಶೀಲ್ ನಮೋಶಿ 2014 ರಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯದೆ ಸೋತಿದ್ದರು. ಇದೀಗ ಮತ್ತೆ ಗೆಲುವಿನ ಹಳಿಗೆ ಮರಳಲು ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅವರಿಗೆ ಟಿಕೆಟ್ ನೀಡಿದ್ದು, ರಾಜ್ಯದಲ್ಲಿ ತನ್ನದೇ ಪಕ್ಷ ಅಧಿಕಾರದಲ್ಲಿರುವ ಕಾರಣ ಗೆಲುವಿನ ವಿಶ್ವಾಸದಲ್ಲಿ ಆ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿ ನಮೋಶಿ ಇದ್ದಾರೆ. ಇನ್ನು ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಸಿದ್ದು, ದೇವೇಗೌಡರು ಚುನಾವಣಾ ಪ್ರಚಾರ ಸಭೆ ನಡೆಸಿದ್ದಾರೆ.
ಆಡಳಿತ ಪಕ್ಷದ ಪರ ಒಲವು?
ಕಲ್ಯಾಣ ಕರ್ನಾಟಕ ಭಾಗದ ಒಟ್ಟು ೬ ಜಿಲ್ಲೆಗಳ ಶಿಕ್ಷಕ ಮತದಾರರು ಈ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದಾರೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಮಾನ್ಯ ಮತದಾರರ ಯೋಚನೆಯಂತೆ ಶಿಕ್ಷಕರ ಮತದಾರರ ಯೋಚನೆಯ ದಿಕ್ಕೆ ಬದಲಿರುತ್ತದೆ. ರಾಜ್ಯ ಸರ್ಕಾರ ಯಾವ ಪಕ್ಷದ್ದು ಇರುತ್ತದೆಯೋ ಅದೇ ಪಕ್ಷಕ್ಕೆ ಮಣೆ ಹಾಕುವುದು ವಾಡಿಕೆ. ಕಳೆದ 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಹೈಕೋರ್ಟ್‌ನ ವಕೀಲ, ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ 9022 ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಈ ಬಾರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಬಿಜೆಪಿ ಗೆಲ್ಲುವುದು ಸುಲಭ ಎನ್ನುವ ಲೆಕ್ಕಾಚಾರ ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ.
ಕ್ಷೇತ್ರದಲ್ಲಿ ನಾಯಕರ ರೌಂಡ್ ಮತ್ತು ಸೌಂಡ್:
ಚುನಾವಣಾ ನಾಮಪತ್ರ ಸಲ್ಲಿಕೆ ಮುಗಿದಿದ್ದು, ಚುನಾವಣಾ ರಣಕಣ ರಂಗೇರಿದೆ. ಬಿಜೆಪಿಯಿಂದ ಉಸ್ತುವಾರಿ ವಹಿಸಿಕೊಂಡ ಸಚಿವ ಈಶ್ವರಪ್ಪ ಒಂದು ಸುತ್ತಿನ ಪ್ರಚಾರ ಸಭೆ ನಡೆಸಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿರುವ ಬಿಜೆಪಿ ಪ್ರಚಾರದಲ್ಲಿ ಮುಂದೆ ಇದೆ. ಒಂದು ಸುತ್ತಿನ ೬ ಜಿಲ್ಲೆಗಳ ಪ್ರವಾಸ ಮುಗಿಸಿ ಎರಡನೇ ಸುತ್ತಿಗೆ ಅಣಿಯಾಗಿದೆ. ೬ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ಸಂಸದರು ಹೆಚ್ಚಿದ್ದು ಬಿಜೆಪಿ ಸಹಜವಾಗಿ ಗೆಲುವಿನ ಉತ್ಸಾಹದಲ್ಲಿದೆ.
ಇನ್ನು ಕಳೆದ ಬಾರಿ ಗೆದ್ದ ಕಾರಣ ಈ ಬಾರಿಯೂ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್‌ನ ಅಭ್ಯರ್ಥಿ ಪರ ಸ್ವತಃ ದೇವೇಗೌಡರೇ ಅಖಾಡಕ್ಕೆ ಇಳಿದು ಪ್ರಚಾರಕ್ಕೆ ಮುಂದಾಗಿ ತನ್ನ ಅಭ್ಯರ್ಥಿ ಗೆಲ್ಲಿಸಲು ಮುಂದಾಗಿದ್ದಾರೆ.

ಇವರೆಲ್ಲ ಅಭ್ಯರ್ಥಿಗಳು
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿತ್ತು. ಅದರಂತೆ ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ, ಬಿಜೆಪಿಯಿಂದ ಶಶಿಲ್ ನಮೋಶಿ, ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಯ್ಯ ಮಠ, ತುಳಸಪ್ಪ ದಾಸರ, ಡಾ. ಚಂದ್ರಕಾಂತ ಶಿಂಗೆ, ಪ್ರಭುಲಿಂಗಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಶಶಿಲ್ ನಮೋಶಿ 4 ಸೆಟ್ ಸಲ್ಲಿಸಿದ್ದರೆ, ಶರಣಪ್ಪ ಮಟ್ಟೂರ 2 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.

6 ಜಿಲ್ಲೆ, 31 ಸಾವಿರ ಮತದಾರರು
ಈಶಾನ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಆರು ಜಿಲ್ಲೆಗಳು ಬರಲಿವೆ. ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳ ಶಿಕ್ಷಕರು ಮತದಾರರಾಗಿದ್ದಾರೆ. ಇನ್ನೂ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಲಭ್ಯ ಮಾಹಿತಿ ಪ್ರಕಾರ ಒಟ್ಟು 31 ಸಾವಿರ ಮತದಾರರಿದ್ದಾರೆ. ಅ. 8ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕೊನೆಯ ದಿನವಾಗಿತ್ತು. ಮೊದಲಿದ್ದ ಮತದಾರರ ಜೊತೆಗೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದರಲ್ಲಿ ಯಾರು ಹೆಚ್ಚಾಗಿ ಶಿಕ್ಷಕರ ಮನ ಗೆಲ್ಲುತ್ತಾರೋ ಅವರು ಗೆದ್ದು ಬರಲಿದ್ದಾರೆ.
ಕಳೆದ ಬಾರಿ ಮತದಾರರು, ಫಲಿತಾಂಶ..
ಕಳೆದ ಬಾರಿ ಕ್ಷೇತ್ರದಲ್ಲಿ ಒಟ್ಟು 31,809 ಮತದಾರರಿದ್ದರು. ಇದರಲ್ಲಿ 19,183 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ ಒಟ್ಟು ೧೭,೭೪೮ ಮತ ಕ್ರಮಬದ್ದವಾಗಿದ್ದವು, 1,403 ಮತ ತಿರಸ್ಕೃತವಾಗಿದ್ದು, 32 ನೋಟಾ ಚಲಾವಣೆಯಾಗಿತ್ತು. ಚಲಾಯಿತ ಮತಗಳಲ್ಲಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ 9022 ಮತ ಪಡೆದು ಜಯಗಳಿಸಿ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದರು. ಇನ್ನು ಬಿಜೆಪಿಯ ಶಶೀಲ್ ನಮೋಶಿ 6933 ಮತ ಸೋಲುಂಡಿದ್ದರು. ಹ್ಯಾಟ್ರಿಕ್ ಜಯ ಸಾಧಿಸಬೇಕೆಂದಿದ್ದ ನಮೋಶಿ ಕನಸು 2014 ರಲ್ಲಿ ಭಗ್ನಗೊಂಡಿತ್ತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!