ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಈತ ಪಕ್ಕಾ ಟ್ಟೆಂಟಿ-20 ಪಂದ್ಯಗಳಿಗೆ ಹೇಳಿ ಮಾಡಿಸಿದ ಕ್ರಿಕೆಟರ್. ಬಲಗೈ ಬ್ಯಾಟ್ಸಮನ್ ಮತ್ತು ಎಡಗೈ ಆಫ್ ಬ್ರೇಕ್ ಬೌಲರ್ ಆಗಿರುವ ಈತ ಈಗಾಗಲೇ ಕೆಪಿಎಲ್‌ನಲ್ಲಿ, ಕರ್ನಾಟಕ ತಂಡದ ಒನ್‌ಡೇ ತಂಡದಲ್ಲಿ ತನ್ನ ಛಾಪು ಮೂಡಿಸಿದ್ದಾನೆ.
ಈತ ಗದಗ ನಗರದ ಯುವಕ. ಅನಿರುದ್ಧ ಜೋಶಿ. ಈ ಸಲದ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡಲಿದ್ದಾನೆ. ಕಳೆದ ಸಲ ಬೆಂಗಳೂರು ರಾಯಲ್ಸ್ ತಂಡದಲ್ಲಿದ್ದನಾದರೂ ಆಡುವ 11ರಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಗದಗಿನ ಜಾನೋಪಂಥರ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಪಟ್ಟುಗಳನ್ನು ಕಲಿತ ಅನಿರುದ್ಧ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಗದಗ ಹೆಸರನ್ನು ಕಂಗೊಳಿಸಿದ ಸುನೀಲ್ ಜೋಶಿಯವರ ಅಣ್ಣನ ಮಗ. ಐಪಿಎಲ್ ಬಿಡ್ಡಿಂಗ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಈತನನ್ನು 20 ಲಕ್ಷ ರೂ. ಮುಖಬೆಲೆಗೆ ಖರೀದಿಸಿದೆ.
ಸದ್ಯದ ಭಾರತ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸುನಿಲ್ ಜೋಶಿಯವರ ಹಿರಿಯ ಸಹೋದರ ದಿ. ಅಶೋಕ ಜೋಶಿಯವರ ಪುತ್ರನಾಗಿರುವ ಅನಿರುದ್ಧ, ಕ್ರಿಕೆಟ್ ಕುಟುಂಬದಿಂದ ಬಂದಂತಹ ಯುವಕ. ತಂದೆ ಸಹ ಕ್ಲಬ್ ಮಟ್ಟದ ಆಟಗಾರರಾಗಿದ್ದರು.
ಶಾಲಾ ದಿನಗಳಿಂದ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದ ಅನಿರುದ್ಧ ಜೋಶಿ, ತನ್ನ ತಂದೆಯೇ ನನ್ನ ಗುರು ಎಂದು ಹೇಳಿದ್ದಾರೆ. ಪ್ರಾರಂಭದಲ್ಲಿ ಕ್ರಿಕೆಟ್ ಅಭ್ಯಾಸ, ತರಬೇತಿ ಹಾಗೂ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದು ಗದುಗಿನ ಹಳೆಯ ಕ್ಲಬ್‌ಗಳಲ್ಲೊಂದಾದ ಗದಗ ಸಿಟಿ ಕ್ರಿಕೆಟ್‌ರ್ಸ ಮೂಲಕ (ಈಗಿನ ಜಾನೋಪಂತರ್ ಕ್ರಿಕೆಟ ಅಕಾಡೆಮಿ) ಕ್ರಿಕೆಟ್ ಆರಂಭಿಸಿದ್ದ.
ಹಿರಿಯ ಆಟಗಾರ ಹಾಗೂ ತರಬೇತಿದಾರ ವೀರಣ್ಣ ಜಾನೋಪಂತರರ ನೇತೃತ್ವದ ಈ ಕ್ಲಬ್‌ನಲ್ಲಿ ಅನಿರುದ್ಧ ಜೋಶಿ ಪಳಗಿದ ನಂತರ ಲೀಗ್ ಮಟ್ಟದಲ್ಲಿ, ರಾಜ್ಯ ಅಂಡರ್-19 ತಂಡದಲ್ಲಿ ಮಿಂಚಿದ್ದ. ನಂತರ ಕೆಪಿಎಲ್‌ನಲ್ಲಿ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದು ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಒನ್ ಡೇ ಮತ್ತು ಟೆಂಟಿ-20 ಪಂದ್ಯಗಳಲ್ಲಿ ಗಮನ ಸೆಳೆದಿದ್ದ.
ಸೆ. 19ರಿಂದ ಶುರುವಾಗಲಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಈ ಯುವಕ ಯಶಸ್ಸು ಪಡೆದು ಗದಗಿನ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸೋಣ.