ವಿಜಯಸಾಕ್ಷಿ ಸುದ್ದಿ, ಗದಗ
ಘನತ್ಯಾಜ್ಯ ವಿಲೇವಾರಿ ಮಾಡಿದ ಕಾಮಗಾರಿಯ ಬಿಲ್ ಕೊಡಲು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಎಇಇ ಎಸಿಬಿ ಬಲೆಗೆ ಬಿದ್ದ ಬೆನ್ನಲ್ಲೇ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಎಇಇ ವರ್ಧಮಾನ್ ಹುದ್ದಾರ್ 14 ಲಕ್ಷ ರೂ. ಮೌಲ್ಯದ ಬಿಲ್ ಗೆ 25 ಸಾವಿರ ಹಣ ಕಮಿಷನ್ ರೂಪದಲ್ಲಿ ಪಡೆಯುತ್ತಿದ್ದಾಗ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು.
ಇದನ್ನೂ ಓದಿ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ
ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಕಮಿಷನರ್ ರಮೇಶ್ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಅವರನ್ನು ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ, ಮಧ್ಯರಾತ್ರಿ ಬಿಟ್ಟು ಕಳುಹಿಸಿದ್ದಾರೆ.

ಐದು ಗಂಟೆಗಳ ಕಾಲ ಇಬ್ಬರೂ ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು, ಕಾಮಗಾರಿ, ಬಿಲ್, ಕಮಿಷನ್ ಸೇರಿದಂತೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.

ಮುಂಜಾನೆ ಜಗಳ…ಸಂಜೆ ರೇಡ್
ಕಳೆದ ಹಲವು ದಿನಗಳಿಂದಲೂ ಈ ಕಾಮಗಾರಿಗೆ ಸಂಬಂಧಿಸಿದಂತೆ ಅಬ್ದುಲ್ ಸಲಾಮ್ ಮನಿಯಾರ್ ಅವರಿಗೆ ಬಿಲ್ ಮಾಡಿಕೊಡಲು ಸತಾಯಿಸುತ್ತಿದ್ದರು ಎನ್ನಲಾಗಿದೆ. ಬುಧವಾರ ಮುಂಜಾನೆಯೂ ಕಮಿಷನ್ ಹಣಕ್ಕೆ ಆಯುಕ್ತರ ಚೇಂಬರ್ ನಲ್ಲಿ ಜಗಳವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಯೊಂದು ಬಿಲ್ ಗೂ ಕಮಿಷನ್ ಕಡ್ಡಾಯವಾಗಿ ಕೊಡಲೆಬೇಕು ಅನ್ನೋ ರೂಲ್ಸ್ ನಗರಸಭೆಯಲ್ಲಿ ಜಾರಿ ಇತ್ತು. ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ 20, 30 ಲಕ್ಷ ಕೊಟ್ಟು ಇಲ್ಲಿಗೆ ಬಂದೀವಿ…ಹಂಗ ಬಂದಿಲ್ಲ ಅಂತ ಮರುತ್ತರ ಕೊಡುತ್ತಿದ್ದರು ಅನ್ನೋ ಮಾತುಗಳು ನಗರಸಭೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದವು.

ಬಾಯಿಬಿಟ್ಟರೆ ಕಮಿಷನ್….ಕಮಿಷನ್ ಇಲ್ದೇ ಯಾವುದೇ ಬಿಲ್ ಕೊಡ್ತಾ ಇಲ್ಲ. ಹಿಂಗಾದರ ಹೆಂಗ ಅಂತ ಕೆಲವು ಗುತ್ತಿಗೆದಾರರು ಗೊಣಗಾಡುತ್ತಿದ್ದರು ಎಂದು ಹೆಸರು ಹೇಳಲು ನಿರಾಕರಿಸಿದ ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.