ಐಆರ್‌ಬಿ ಕೇಂದ್ರಕ್ಕೆ ಭೇಟಿ ನೀಡಿ ಸಸಿ ನೆಟ್ಟ ಸಚಿವರು

0
Spread the love

ಪ್ರವಾಸಿ ತಾಣವನ್ನಾಗಿಸಲು ಶೆಟ್ಟರ್ ಭರವಸೆ

-ಅಂಗನವಾಡಿ ಕೇಂದ್ರ ಆರಂಭಿಸಲು ಸಚಿವೆ ಜೊಲ್ಲೆ ಒಲವು

-ಮೀಸಲು ಪಡೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಇಂಡಿಯನ್ ರಿಜರ್ಸ್ ಬಟಾಲಿಯನ್‌ಗೆ (ಐಆರ್‌ಬಿ) ಬುಧವಾರ ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಹಾಗೂ ಪ್ರಭು ಚಹ್ವಾಣ್ ಭೇಟಿ ನೀಡಿ, ಅಲ್ಲಿನ ಪ್ರಗತಿ ಕಾರ್ಯಗಳ ಕುರಿತು ಮೆಚ್ಚುಗೆ ಸೂಚಿಸಿದರು.

ಹೊಸಪೇಟೆಯಿಂದ ಕೊಪ್ಪಳಕ್ಕೆ ಹೋಗುವಾಗ ಸಂಸದ ಕರಡಿ ಸಂಗಣ್ಣ ಅವರ ಒತ್ತಾಸೆಗೆ ಮಣಿದು ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಪ್ರಭು ಚವಾಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಡಾ.ಸಂದೀಪ್, ನೇಮಿರಾಜ್ ನಾಯಕ್ ಸೇರಿದಂತೆ ಇತರ ಮುಖಂಡರು ಐ ಆರ್ ಬಿ ಕೇಂದ್ರ‌ ಮುನಿರಾಬಾದ್ ಗೆ ಭೇಟಿ ನೀಡಿದರು.

ಭೇಟಿ ನೀಡಿದ ಸವಿ ನೆನಪಿಗಾಗಿ ಐಆರ್‌ಬಿ ಸಿಬ್ಬಂದಿ ಸಸಿ ನೆಡುವಂತೆ ಮನವಿ ಮಾಡಿದ್ದರಿಂದ ಆಗಮಿಸಿದ ಗಣ್ಯರು ಐಆರ್‌ಬಿ ಆವರಣದಲ್ಲಿ ಸಸಿ ನೆಟ್ಟರು.

ಬಟಾಲಿಯನ್‌ನ ಆವರಣದೊಳಗೆ ನಡೆದ ಹಲವು ಅಭಿವೃದ್ಧಿ ಕೆಲಸಗಳ ಸ್ಥಳಗಳಿಗೆ ಭೇಟಿ ನೀಡಿ ಇದೊಂದು ಮಾದರಿ ಬಟಾಲಿಯನ್ ಎಂದು ಶೆಟ್ಟರ್ ಸೇರಿದಂತೆ ವಿವಿಧ ಗಣ್ಯರು ಶ್ಲಾಘಿಸಿದರು.

ಈ ವೇಳೆ ಮಾತನಾಡಿದ ಐಆರ್‌ಬಿಯ ಸಹಾಯಕ ಕಮಾಂಡೆಂಟ್ ಸತೀಶ್.ಇ. ಅವರು, ಹಲವು ದಾನಿಗಳ ಸಹಾಯ, ಸಹಕಾರದಿಂದ ಬಟಾಲಿಯನ್‌ನ ಸಿಬ್ಬಂದಿಯ ದೈಹಿಕ ಶ್ರಮದಿಂದ 5 ಎಕರೆ ಜಾಗದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಐಆರ್‌ಬಿ ಯಲ್ಲಿ ರಸ್ತೆ ಸಮಸ್ಯೆ ಇದ್ದು, ಸರಕಾರದ ಸಹಕಾರ ಸಿಕ್ಕರೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಈ ರೀತಿ ಪೊಲೀಸರೇ ಸೇರಿ ಕೆರೆ ನಿರ್ಮಿಸಿರುವುದು ರಾಜ್ಯದಲ್ಲೇ ಮೊದಲು. ಸುತ್ತ ಮುತ್ತ ಗಿಡ-ಮರ ಬೆಳೆಸಿ, ಇಲ್ಲಿನ ಸಿಬ್ಬಂದಿಯೇ ವಿನ್ಯಾಸ ಮಾಡಿದ ಅಶೋಕ ಸ್ತಂಭ ಮನಮೋಹಕ. ರಸ್ತೆ ಅಭಿವೃದ್ಧಿ ಕುರಿತು ಅಂದಾಜು ಪಟ್ಟಿಸಮೇತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಐಆರ್‌ಬಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸುವ ಅಗತ್ಯವಿದೆ. ಈ‌ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾರ್ಯ ಆರಂಭಿಸಲಾಗುವುದು ಎಂದರು.

ಕಮಾಂಡೆಂಟ್ ಬಾ.ರಾಮಕೃಷ್ಣ ಸ್ವಾಗತಿಸಿದರು. ಡಿ ಜಿ ಮತ್ತು ಐ.ಜಿಯವರು ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಭಾರತದಲ್ಲಿರುವ ರಿಸರ್ವ್ ಕೇಂದ್ರಗಳಲ್ಲೇ ಒಂದು ಮಾದರಿ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದನ್ನು ಐಆರ್‌ಬಿ ಸಿಬ್ಬಂದಿ ಸ್ಮರಿಸಿದರು.


Spread the love

LEAVE A REPLY

Please enter your comment!
Please enter your name here