(ಅಭಿವೃದ್ಧಿ ಮರೆತ ಚಿಂಚಲಿ, ಭಾಗ-2)
ದುರ್ಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಮುಳಗುಂದ
ಗದಗ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಪೈಕಿ ಚಿಂಚಲಿ ಗ್ರಾ.ಪಂ. ಆಡಳಿತ ಸಂಪೂರ್ಣ ಹಳಿ ತಪ್ಪಿ, ತುಕ್ಕು ಹಿಡಿದಿದೆ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿಯಾಗಿ ಆಗಮಿಸುತ್ತಿದ್ದು, ವಾರದಲ್ಲಿ 1-2 ದಿನ ಕಚೇರಿಯಲ್ಲಿ ಕಾಣಸಿಗುತ್ತಾರೆ. ಇದರಿಂದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತುರ್ತು ಕೆಲಸಗಳಿದ್ದಲ್ಲಿ ಸಾರ್ವಜನಿಕರು ಅಧಿಕಾರಿಗಳು ಇರುವಲ್ಲಿಗೆ ಹುಡುಕಿಕೊಂಡು ದೂರದ ಗದಗ ನಗರಕ್ಕೇ ಬರಬೇಕಿದೆ.
ಚಿಂಚಲಿ ಗ್ರಾ.ಪಂ.ನಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳ ಕಾರ್ಯವೈಖರಿ ಹದಗೆಟ್ಟು ಹಳ್ಳ ಹಿಡಿದಿದ್ದು, ಸಮಸ್ಯೆಗಳ ಕೂಪವಾಗಿದೆ.
ಗ್ರಾ.ಪಂ. ವ್ಯಾಪ್ತಿಯ ನೀಲಗುಂದ ಗ್ರಾಮಸ್ಥರು ಸಾಕಷ್ಟು ವರ್ಷಗಳಿಂದ ಇಲ್ಲಿನ ಅನನೂಕೂಲ ನೋಡಿ ಬೇಸತ್ತಿದ್ದರು. ನಿತ್ಯ ಪಂಚಾಯತಿಗೆ ಬಂದರೂ ಆಗಬೇಕಿದ್ದ ಕೆಲಸ ಒಂದು ದಿನದಲ್ಲಿ ಆಗುತ್ತಿರಲಿಲ್ಲ. ಹಾಗಾಗಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗ್ರಾಮಸ್ಥರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾ.ಪಂ.ಚುನಾವಣೆ ಬಹಿಷ್ಕರಿಸಿದ್ದರು.
ಕರೆದು ಕಟ್ಟುವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ ಎಂಬಂತೆ ಇಲ್ಲಿ ಯಾರು ಹೇಳುವವರಿಲ್ಲ, ಕೇಳುವವರಿಲ್ಲ. ತಮ್ಮಿಚ್ಛೆ, ತಮ್ಮ ಕಾರುಬಾರು ಎಂಬಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಕಾಸು ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡಿ ಕೊಡುತ್ತಾರೆ ಎನ್ನಲಾಗುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿರುವ ಇಲ್ಲಿನ ಜನರ ಪರಿಸ್ಥಿತಿ ಗಂಟೂ ಹೋಯ್ತು, ನಂಟೂ ಹೊಂಟೋಯ್ತು! ಎಂಬಂತಾಗಿದೆ.
ಗುತ್ತಿಗೆದಾರರ ಹಾವಳಿ: ಇಲ್ಲಿ ಬಹುತೇಕ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಗುತ್ತಿಗೆದಾರರ ಕೆಲಸ ಮಾತ್ರ ಸಲೀಸಾಗಿ ಮಾಡಿಕೊಟ್ಟಿರುವ ಮತ್ತು ಮಾಡಿಕೊಡುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಕಾಂಟ್ರ್ಯಾಕ್ಟ್ ದಾರರು ಇದ್ದಲ್ಲಿಯೇ ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದಾರೆ. ಸಾರ್ವಜನಿಕರ ಕೆಲಸವೆಂದರೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಕೆಲಸಕ್ಕಾಗಿ ಕಾಲಾವಕಾಶ ತೆಗೆದುಕೊಂಡು ಅಲೆದಾಡಿಸುವ ಸಂಸ್ಕೃತಿ ಮುಂದುವರೆದಿದೆ. ಕೆಲಸವಾಗಬೇಕಾದರೆ ಜನರು ಅವರಿರವರ ಕೈ-ಕಾಲು ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಜನರು ಪಂಚಾಯತಿಗೆ ಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ. ಆದರೆ, ಗುತ್ತಿಗೆದಾರರ ಹಾವಳಿ ಮಿತಿ ಮೀರಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹಗರಣಗಳ ತಾಣ:
ಚಿಂಚಲಿ ಗ್ರಾಮ ಪಂಚಾಯತಿ ಮೇಲೆ ಯಾವೊಬ್ಬ ಅಧಿಕಾರಿಗಳು ಕಣ್ಣು ಹಾಯಿಸುತ್ತಿಲ್ಲ. ಇದರಿಂದ ಹಗರಣಗಳು ತಾಂಡವಾಡುತ್ತಿವೆ. ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸದೆ ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳು ಹಣ ಲೂಟಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಸರ್ಕಾರದ ಸುಮಾರು 15 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ, ಓರ್ವ ಪಿಡಿಒ ಮೇಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಅಕ್ರಮಗಳಿಗೆ ಹೆಚ್ಚು ಆಸ್ಪದ ನೀಡುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.
ವಾರಕ್ಕೆಷ್ಟು ಸಭೆ?:
ಚಿಂಚಲಿ ಗ್ರಾ.ಪಂ. ಪಿಡಿಒ ಬರೀ ಗದಗದಲ್ಲಿ ಜಿಪಂ, ತಾಪಂ ಸಭೆ ಇದೆ ಎಂದು ದಿನನಿತ್ಯ ಒಂದಿಲ್ಲೊಂದು ಸುಳ್ಳು ಹೇಳಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಸಭೆಯ ಹೆಸರಿನಲ್ಲಿ ಕಚೇರಿಗೆ ಗೈರಾಗಿ ಜಿಲ್ಲಾ ಕೇಂದ್ರದಲ್ಲಿ ಕುಳಿತು ಗುತ್ತಿಗೆದಾರರ ಕೆಲಸ ಮಾಡಿ ಕೊಡುತ್ತಿದ್ದಾರೆ. ಹಾಗಾಗಿ, ಒಂದು ವಾರದಲ್ಲಿ ಜಿಪಂ ಮತ್ತು ತಾಪಂಗಳಲ್ಲಿ ಪಿಡಿಒಗಳ ಸಭೆಗಳು ಎಷ್ಟು ನಡೆಯುತ್ತವೆ ಎಂಬುವುದನ್ನು ಸಿಇಒ ಹಾಗೂ ಇಒ ಅವರೇ ಉತ್ತರಿಸಬೇಕಿದೆ.
ನಡೆಯದ ಸಭೆಗಳು
ಪ್ರತಿ 6 ತಿಂಗಳಿಗೊಮ್ಮೆ ವಾರ್ಡ್ ಮತ್ತು ಗ್ರಾಮಸಭೆ ನಡೆದಿರುವ ಉದಾಹರಣೆಗಳಿಲ್ಲ. ಜನರ ಬೇಕುಬೇಡಗಳನ್ನು ತಿಳಿಯದೆ, ಗುತ್ತಿಗೆದಾರರ ಆಣತಿಯಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಗ್ರಾಮಸ್ಥರ ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆ ತಯಾರಿ ಆಗುತ್ತಿಲ್ಲ. ಪಿಡಿಒ ಅವರು ತಂದುಕೊಟ್ಟ ಇಂತಹ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು ಕಣ್ಣುಮುಚ್ಚಿ ಅನುಮೋದನೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕುಂದು ಕೊರತೆಗಳಿಗೆ ಶ್ವಾಶತ ಪರಿಹಾರ ಸಿಗುತ್ತಿಲ್ಲ.