ವಿಜಯಸಾಕ್ಷಿ ಸುದ್ದಿ, ಗದಗ
ಶಿವಮೊಗ್ಗದಲ್ಲಿ ನಡೆದ ಘಟನೆ ದುರಾದೃಷ್ಟಕರ. ಘಟನೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಉತ್ತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತದೆ. ಜಿಲೆಟಿನ್ ಬಳಸಲು ಪರವಾನಗಿ ಕೊಡುವ ಅಧಿಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಕಪ್ಪತ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಿಲ್ಲೆಯ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಗುಡ್ಡಕ್ಕೆ ಹಾನಿ ಮಾಡುವ ಯಾವುದೇ ಗಣಿಗಾರಿಕೆ ಮಾಡಲು ಅನುಮತಿ ಕೊಡುವುದಿಲ್ಲ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದ್ದೇವೆ. ಅಂತವರಿಗೆ ಈಗಾಗಲೇ ನೋಟಿಸ್ ನೀಡಿ ಬಂದ್ ಮಾಡಿಸಿದ್ದೇವೆ. ಅಲ್ಲದೇ, ಕ್ರಷರ್ ಘಟಕಗಳನ್ನು ಬಂದ್ ಮಾಡಲಾಗಿದೆ. ಒಂದು ವೇಳೆ ನಡೆಯುತ್ತಿದ್ದರೆ, ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಖಾತೆ ಬದಲಾವಣೆ ವಿಷಯದಲ್ಲಿ ಯಾವುದೇ ಅಸಮಾಧಾನವಿಲ್ಲ.
ಸಿಎಂ ನೀಡಿರುವ ಹೊಸ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನನ್ನನ್ನು ರೆಸಾರ್ಟ್ ರಾಜಕಾರಣಕ್ಕೆ ಹೋಲಿಸಬೇಡಿ. ಮೊದಲು ಶಾಸಕನಾಗಬೇಕು ಅಂತಾ ಬಡದಾಡುತ್ತೇವೆ. ಶಾಸಕನಾದ ಮೇಲೆ ಪಕ್ಷ ಅಧಿಕಾರಕ್ಕೆ ಬರಬೇಕು ಅಂತಾ ಚಿಂತೆ ಮಾಡುತ್ತೇವೆ.
ಅಧಿಕಾರಕ್ಕೆ ಬಂದ ಮೇಲೆ ಮಂತ್ರಿಯಾಗಬೇಕೆಂದು ಬಯಸುತ್ತೇವೆ. ಸಚಿವನಾದ ಮೇಲೆ ಖಾತೆಗಾಗಿ ಪ್ರಯತ್ನಿಸುತ್ತೇವೆ. ಇದು ಮನುಷ್ಯನ ಮಾನಸಿಕ ದೌರ್ಬಲ್ಯ. ಇಂತಹ ದೌರ್ಬಲ್ಯದಿಂದ ನಾನು ದೂರ ಇದ್ದೇನೆ ಎಂದು ಹೇಳಿದರು.
ರೆಸಾರ್ಟ್ ರಾಜಕಾರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
ರೆಸಾರ್ಟ್ ರಾಜಕಾರಣ ಅಂತಾ ನಾನು ಒಪ್ಪುವುದಿಲ್ಲ. ಸಚಿವ ರಮೇಶ ಜಾರಕಿಹೊಳಿಗೆ ಕರೆ ಮಾಡಿದಾಗ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ಸಲುವಾಗಿ ನಾನು ರೆಸಾರ್ಟ್ ನಲ್ಲಿದ್ದೇನೆ ಅಂತಾ ಹೇಳಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡಾರಾದ ಪ್ರಶಾಂತ ನಾಯ್ಕರ್, ಶಿವರಾಜ್ ಹಿರೇಮನಿಪಾಟೀಲ ಸೇರಿದಂತೆ ಹಲವರು ಇದ್ದರು.