ಕಪ್ಪತಗುಡ್ಡದ ಮೇಲೆ ಚಿನ್ನದ ಕರಿನೆರಳು: ರಾಮಘಡ್ ಕಂಪನಿಯಿಂದ ಅರ್ಜಿ, ಸರ್ಕಾರದ ಮಟ್ಟದಲ್ಲಿ ಲಾಬಿ! 

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಪ್ಪತಗುಡ್ಡದಲ್ಲಿರುವ ಚಿನ್ನದ ನಿಕ್ಷೇಪಗಳ ಮೇಲೆ ಮತ್ತೊಮ್ಮೆ ಗಣಿ ಮಾಫಿಯಾದ ಕಣ್ಣು ಬಿದ್ದಿದೆ. ಜನರ ಪ್ರತಿರೋಧವಿದ್ದರೂ, ಪರಿಸರಪ್ರಿಯರ ಆಕ್ಷೇಪಗಳಿದ್ದರೂ ಗಣಿ ಲಾಬಿ ಮಾತ್ರ ಮರಳಿ ಯತ್ನ ಮಾಡುವುದನ್ನು ಬಿಟ್ಟಿಲ್ಲ. ಸದ್ಯಕ್ಕೆ ಮತ್ತೊಮ್ಮೆ ಚಿನ್ನದ ಗಣಿಗಾರಿಕೆಯ ಕರಿನೆರಳು ಕಪ್ಪತಗುಡ್ಡವನ್ನು ಆವರಿಸಿದೆ. ರಾಮಘಡ್ ಮಿನರಲ್ಸ್ ಆ್ಯಡ್ ಮೈನಿಂಗ್ ಲಿಮಿಟೆಡ್ (ಆರ್‌ಎಂಎಂಎಲ್) ಈಗ ಚಿನ್ನ ಹೆಕ್ಕಲು ಅನುಮತಿಗಾಗಿ ಕಾದು ಕುಳಿತಿದ್ದು, ಅನುಮತಿಗೆ ಅಗತ್ಯವಾದ ಎಲ್ಲ ತೆರೆಮರೆಯ ‘ಕ್ರಿಯೆ’ಗಳಲ್ಲಿ ಅದು ನಿರತವಾಗಿದೆ ಎನ್ನಲಾಗಿದೆ.

ವನ್ಯಜೀವಿಧಾಮವಾಗಿರುವ ಕಪ್ಪತಗುಡ್ಡ ಪ್ರದೇಶದಲ್ಲಿ ಯಾವುದೇ ಬೃಹತ್ ಕಾಮಗಾರಿಗಳನ್ನೇ ನಡೆಸುವಮತಿಲ್ಲ. ಅಂತದ್ದರಲ್ಲಿ ಗುಡ್ಡವನ್ನೇ ಆಳಕ್ಕೆ ಬಗೆಯುವ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲಂತೂ ಬರುವುದಿಲ್ಲ. ಆದರೂ ಕಂಪನಿಯೊಂದು ಬಿಟ್ಟೂ ಬಿಡದೇ ಇದರ ಹಿಂದೆ ಬಿದ್ದಿರುವುದನ್ನು ನೋಡಿ, ಚಿನ್ನದ ಗಣಿಗಾರಿಕೆಗೆ ಎಲ್ಲಿ ಅನುಮತಿ ಸಿಕ್ಕೇ ಬಿಡುತ್ತದೆಯೋ ಎಂದು ಪರಿಸರವಾದಿಗಳು ಆತಂಕಗೊಂಡಿದ್ದಾರೆ. ಕೆಲವರು ಪ್ರತಿಭಟನೆಗೂ ತಯಾರಾಗುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ಅರಣ್ಯ ಇಲಾಖೆಗೆ ಈ ಅರ್ಜಿಯ ಕುರಿತಂತೆ ಪರಿಶೀಲನೆ ನಡೆಸಿ ವರದಿ ಕಳಿಸಲು ರಾಜ್ಯ ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಸೂಚಿಸಿದೆ ಎಂದು ಡಿಎಫ್‌ಒ ಸೂರ್ಯಸೇನ್ ತಿಳಿಸಿದ್ದಾರೆ.

              ಪದೇ ಪದೇ ಅರ್ಜಿ!
ಬಳ್ಳಾರಿ ಮೂಲದ ಆರ್‌ಎಂಎಂಎಲ್ ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿ 2019 ಅಕ್ಟೋಬರ್ 10 ರಂದು ಅರ್ಜಿ ಸಲ್ಲಿಸಿತ್ತು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಸರ್ವೆ ನಂ. 45, 49 ಮತ್ತು 50ರಲ್ಲಿ ಒಟ್ಟು 39.9 ಹೆಕ್ಟೇರ್ ಅರಣ್ಯ ಭೂಮಿಯನ್ನು ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿ ಅರಣ್ಯ ಇಲಾಖೆ, ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿತ್ತು. ಆರ್‌ಎಂಎಂಎಲ್ ಅರ್ಜಿ ಪರಿಶೀಲಿಸಿದ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿಗಳು, ಕೆಲವು ಮಹತ್ವದ ಮಾಹಿತಿ ಒದಗಿಸಿಲ್ಲ. ಹೀಗಾಗಿ ಈ ಅರ್ಜಿ ಅಪೂರ್ಣವಾಗಿದೆ.

ಅಗತ್ಯ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ ಎಂದು ನಾಲ್ಕು ಪುಟದ ವಿವರಣೆ ನೀಡಿತ್ತು. ಹೀಗಾಗಿ ಆರ್‌ಎಂಎಂಎಲ್ ಕಂಪನಿ, ಈಗ ಅಗತ್ಯ ದಾಖಲೆ, ಮಾಹಿತಿಯನ್ನು ಜೋಡಿಸಿಕೊಂಡು ಮತ್ತೆ ಚಿನ್ನದ ಗಣಿಗಾರಿಕೆಗೆ ಅರ್ಜಿ ಹಾಕಿದೆ. ಅರಣ್ಯ ಇಲಾಖೆ ಅರ್ಜಿ ತಿರಸ್ಕರಿಸುವ ಬದಲು, ಪರಿಒಶೀಲನೆ ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತಂತೆ ಇನ್ನೂ ಎಚ್ಚರ ವಹಿಸಿಲ್ಲ. ಪರಿಸರವಾದಿಗಳು ಮತ್ತು ಸಂಘಟನೆಗಳು ಈ ಬಗ್ಗೆ ಗಮನ ಹರಿಸಿ ಕಪ್ಪತಗುಡ್ಡವನ್ನು ಉಳಿಸಿಕೊಳ್ಳ ಬೇಕಾಗಿದೆ.

ಕ್ವಾರಿಗಳ ಸಂಚು

ಇನ್ನೊಂದು ಕಡೆ ಶಿರಹಟ್ಟಿ ತಾಲೂಕಿನ ವ್ಯಾಪ್ತಿಗೆ ಬರುವ ವನ್ಯಜೀವಿಧಾಮ ಬ್ಲಾಕ್-4 ಅನ್ನು ಅಧಿಸೂಚನೆಯಿಂದ ಹೊರಗಿಡಲು ಜಲ್ಲಿಕಲ್ಲು ಮತ್ತು ಎಂ-ಸ್ಯಾಂಡ್ ಮಾಫಿಯಾ ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರುತ್ತಿದೆ. ಒಂದು ಕಡೆ ಚಿನ್ನದ ಗಣಿಗಾರಿಕೆ, ಇನ್ನೊಂದು ಕಡೆ ಕಲ್ಲು ಗಣಿಗಾರಿಕೆ ಕಪ್ಪತಗುಡ್ಡಕ್ಕೆ ಕರಿನೆರಳಿನಂತೆ ಕಾಡುತ್ತಿವೆ.


   ಅರ್ಜಿ ಸ್ವೀಕರಿಸುವುದೇ ತಪ್ಪು!

2019 ಜನವರಿ 10 ರಂದು ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಸರಕಾರ ಘೋಷಣೆ ಮಾಡಿದ ನಂತರವೂ ಗಣಿ ಕಂಪನಿ ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿದೆ. ವನ್ಯಜೀವಿ ಧಾಮ ಘೋಷಣೆ ಮಾಡಿದ ನಂತರ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ ಎಂದು ನೇರವಾಗಿ ಗಣಿ ಕಂಪನಿಗೆ ಉತ್ತರಿಸುವ ಬದಲು, ಇನ್ನಷ್ಟು ದಾಖಲೆಯೊಂದಿಗೆ ಪುನಃ ಅರ್ಜಿ ಹಾಕಿ ಎಂದು ಇಲಾಖೆಯವರೇ ‘ಬೆಂಬಲ’ ಕೊಡುತ್ತಿರುವುದನ್ನು ನೋಡಿದರೆ, ಆರ್‌ಎಂಎಂಎಲ್ ಕಂಪನಿಯ ಬಾಹುಗಳು ಇಲಾಖೆಯ ಒಳಕ್ಕೂ ಚಾಚಿವೆ ಎಂಬುದು ಸ್ಪಷ್ಟ ಎನ್ನುತ್ತಾರೆ ಪರಿಸರವಾದಿಗಳು.


Spread the love

LEAVE A REPLY

Please enter your comment!
Please enter your name here