ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಲಬುರಗಿ: ಇಂದು ಗುರುವಾರ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.
ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಎಂಬ ಹೊಸ ಹೆಸರು ಪಡೆದ ಹೈದರಾಬಾದ್ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಗಮನಾರ್ಹ ನೆರವು ನೀಡಿಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಲಾಗಿತ್ತು. ಇದೇ ವಿಚಾರದ ಮೇಲೆ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯನ್ನೂ ಎದುರಿಸಿತ್ತು. ಆದರೆ ಅದಾದ ಬಳಿಕ ಆರ್ಟಿಕಲ್ 371(ಜೆ)ಗೆ ತಿದ್ದುಪಡಿ ತಂದಿದ್ದರೂ ಪ್ರಯೋಜವಾಗಿಲ್ಲ ಎಂದು ಜನರೇ ಆರೋಪಿಸುತ್ತಿದ್ದಾರೆ ಎಂದು ಖಂಡ್ರೆ ಹೇಳಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ ಮಾತ್ರಕ್ಕೆ ತೀವ್ರ ಹಿಂದುಳಿದಿರುವ ಪ್ರದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು, ಜನರನ್ನು ಮರುಳು ಮಾಡುವ ಪ್ರಯತ್ನ ಕೈಬಿಟ್ಟು ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.
ಮಂಜೂರಾಗಿರುವ ಯೋಜನೆಗಳು, ಟೆಂಡರ್ ಆಗಿರುವ ಕಾಮಗಾರಿಗಳೂ ಇನ್ನೂ ಆರಂಭವಾಗಿಲ್ಲ. ವಿಶೇಷ ಸ್ಥಾನಮಾನ ಪಡೆದಿರುವ ಭಾಗಕ್ಕೆ ವಿಶೇಷ ಅನುದಾನ ನೀಡುವುದಿರಲಿ, ಹಂಚಿಕೆ ಮಾಡಿದ ಹಣವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಒಂದೂ ಕಾಲು ವರ್ಷದಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. 2019-20 ರ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ 1500 ಕೋಟಿ ಅನುದಾನದಲ್ಲಿ ರೂ 1125 ಕೋಟಿ ಬಿಡುಗಡೆಯಾಗಿದ್ದು ಉಳಿದ ಹಣ 375 ಕೋಟಿ ರೂ. ಇನ್ನೂ ಬಿಡುಗಡೆ ಆಗಿಲ್ಲ ಎಂದಿದ್ದಾರೆ.
ಇನ್ನು 2020-21ರ ಸಾಲಿನಲ್ಲಿ 2000 ಕೋಟಿ ರೂ. ನೀಡುವಂತೆ ಕೇಳಿದ್ದರೂ, 1500 ಕೋಟಿ ಮೀಸಲಿಟ್ಟರು, ಈಗ ಅದರಲ್ಲಿ 1136.86 ಕೋಟಿ ರೂ. ಕ್ರಿಯಾ ಯೋಜನೆ ಮಾಡಿದ್ದಾರೆ. ಇದರಲ್ಲೂ ಹಣ ಕಡಿತ ಆಗಿದೆ.
2020-21 ರಲ್ಲಿ ಇಲ್ಲಿಯವರೆಗೆ ಆರು ತಿಂಗಳುಗಳಲ್ಲಿ ಒಂದೇ ಒಂದು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಘನ ಘೋರ ಅನ್ಯಾಯ ಎಂದು ಖಂಡ್ರೆ ಹೇಳಿದ್ದಾರೆ.
ಉಪ ಚುನಾವಣೆ ನಡೆದ ಒಂದೊಂದು ಕ್ಷೇತ್ರಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾವಿರಾರು ಕೋಟಿ ರೂಪಾಯಿ ಯೋಜನೆ, ಪ್ಯಾಕೇಜ್ ಪ್ರಕಟಿಸಿದರು. ಆದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಏಕೆ ಇಂತಹ ಪ್ಯಾಕೇಜ್ ನೀಡುತ್ತಿಲ್ಲ?. ಈ ಭಾಗದ ಜನರು ಕರ್ನಾಟಕದವರಲ್ಲವೇ? ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
14 ತಿಂಗಳಲ್ಲಿ ಹೊಸ ರಸ್ತೆಯಾಗಲಿ, ನೀರಾವರಿ ಕಾಮಗಾರಿಯಾಗಲಿ, ಹೊಸ ಕಾಲೇಜುಗಳಾಗಲಿ, ವಿವಿಧ ಹುದ್ದೆಗಳ ಭರ್ತಿ ಆಗಲಿ- ಯಾವುದೂ ನಡೆಯುತ್ತಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಳಕಳಿ ಇರಲಿ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದು ಅದರ ಉದ್ಘಾಟನೆಯೂ ಆಗಿದೆ. ಆದರೆ ಕ್ರಿಯಾ ಯೋಜನೆಯಾಗಿಲ್ಲ, ಅ ಸಂಘಕ್ಕೆ ಯಾವುದೇ ರೂಪುರೇಷೆಯೂ ಇಲ್ಲ. ಹೀಗೆ ಕಾಗದದ ಮೇಲೆ ಯೋಜನೆ ರೂಪಿಸುವುದರಿಂದ ಏನು ಪ್ರಯೋಜನ ಎಂದು ಈಶ್ವರ ಖಂಡ್ರೆ ಅವರು ಪ್ರಶ್ನೆ ಎತ್ತಿದ್ದಾರೆ.