ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ ತಾಲ್ಲೂಕಿನ ಹುಲಕೋಟಿ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭರ್ಥಿಗಳನ್ನು ಶಾಸಕ ಎಚ್ ಕೆ ಪಾಟೀಲ್ ರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗಂಭೀರವಾಗಿ ಆರೋಪಿಸಿದ್ದಾರೆ.
ಹುಲಕೋಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೂಂಡಾಗಿರಿ ನಡೆಸುತ್ತಿದ್ದು, ಬಿಜೆಪಿಯ ಅಭ್ಯರ್ಥಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಿಲ್ ಆರೋಪಿಸಿದ್ದಾರೆ.
ಮೊದಲ ಹಂತದ ಗ್ರಾ.ಪಂ.ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ಘಳಿಗೆಯಲ್ಲಿ ಶುಕ್ರವಾರದಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ರವಿವಾರದಿಂದ ಬಿಜೆಪಿ ಅಭ್ಯರ್ಥಿಗಳು ಹುಲಕೋಟಿ ಗ್ರಾಮದಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ನವರೇ ಬಿಜೆಪಿ ಅಭ್ಯರ್ಥಿಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಹುಲಕೋಟಿಯಲ್ಲಿ ಬಿಜೆಪಿಗರ ಮೇಲೆ ಕಾಂಗ್ರೆಸ್ ನವರು ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹುಲಕೋಟಿ ಗ್ರಾಮದ ಬಿಜೆಪಿ ಬೆಂಬಲಿತ ವಾರ್ಡ್ ನಂ.3 ಹಿಂದುಳಿದ ‘ಅ’ ವರ್ಗದ ಅಭ್ಯರ್ಥಿ ನಿಂಗಪ್ಪ ನೀಲಪ್ಪ ದುರಗಣ್ಣವರ, ವಾರ್ಡ್ ನಂ.2 ರ ಮೀಸಲಾತಿ ಅಭ್ಯರ್ಥಿ ಹನಮವ್ವ ದೇವಪ್ಪ ನಿಂಬನಾಯ್ಕರ, ವಾರ್ಡ್ ನಂ.4 ಸಾಮಾನ್ಯ ಅಭ್ಯರ್ಥಿ ಕರಿಯಪ್ಪ ಫಕ್ಕೀರಪ್ಪ ರವಳೋಜಿ, ವಾರ್ಡ್ ನಂ.1 ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ರಾಮನಗೌಡ ಗೌಡಪ್ಪಗೌಡ ಹಿರೇಗೌಡರ ಅವರನ್ನು ಶಾಸಕರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.
4 ನೇ ವಾರ್ಡ್ ಅಭ್ಯರ್ಥಿ ಸವಿತಾ ಹನಮರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆ ಬಿಜೆಪಿ ನಾಯಕರು ಪೊಲೀಸರ ಗಮನಕ್ಕೆ ತಂದಿದ್ದರಂತೆ. ಹಾಗಾಗಿ ಅಭ್ಯರ್ಥಿ ಸವಿತಾ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಿ ಭದ್ರತೆ ಒದಗಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.