ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಕೊರೋನಾ ಸಂದರ್ಭದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅಕ್ರಮ ದಂಧೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಆದ್ರೆ ಜಿಲ್ಲೆಯಲ್ಲಿ ಎಲ್ಲಾ ದಂಧೆಗಳಿಗೆ ಬ್ರೇಕ್ ಹಾಕಲಾಗಿದೆ. ಯಾರೆ ಅಕ್ರಮ ದಂಧೆಗಳನ್ನು ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲ ಪುಢಾರಿ ರಾಜಕಾರಣಿಗಳು ಸಹ ಈ ದಂಧೆಯಲ್ಲಿ ತೊಡಗಿರುವುದು ಮರಳು ಅಕ್ರಮ ದಂಧೆ ನಿಂತಿಲ್ಲ ಎಂಬುದನ್ನು ಸಾರಿ ಹೇಳುತ್ತದೆ.
ಜಿಲ್ಲಾಧಿಕಾರಿಗಳ ಖಡಕ್ ಆದೇಶದಲ್ಲಿಯೂ, ದಂಧೆಕೋರರು ಮಾತ್ರ ಮರಳು ಅಕ್ರಮ ಸಾಗಾಟ ಮಾಡುತ್ತಲೇ ಇದ್ದಾರೆ. ಅದು ಅಧಿಕಾರಿಗಳ ಕಣ್ಣುತಪ್ಪಿಸಿಯೋ ಅಥವಾ ಯಾರದ್ದೂ ಕೈವಾಡದಿಂದಲೋ? ಎಂಬುದು ನೈಜ ತನಿಖೆಯಿಂದ ಮಾತ್ರ ಹೇಳಲು ಸಾಧ್ಯ.
ಮರಳು ದಂಧೆಗೆ ಈಗ ಸರ್ಕಾರಿ ಜಮೀನು ಸೂಕ್ತ. ಯಾಕೆಂದರೆ ಒಂದು ವೇಳೆ ದಾಳಿಯಾದರೆ ಯಾರ ಮೇಲೂ ಕೇಸ್ ದಾಖಲಾಗುವುದಿಲ್ಲ ಎಂದು ಅಕ್ರಮ ಮರಳನ್ನು ಸರ್ಕಾರಿ ಜಾಗದಲ್ಲಿ ಸಂಗ್ರಹಿಸಲಾಗುತ್ತಿದೆ. ಹಳ್ಳ, ನದಿಗಳಲ್ಲಿ ಅಗೆದ ಮರಳನ್ನು ನೇರವಾಗಿ ಸರ್ಕಾರಿ ಜಮೀನುಗಳಲ್ಲಿ ಡಂಪ್ ಮಾಡಲಾಗುತ್ತದೆ. ನಂತರ ರಾತ್ರೋ ರಾತ್ರಿ ಸಾಗಿಸಲಾಗುತ್ತದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೂಪಾ ಸಿ.ಎಚ್. ಅವರನ್ನು ಹಲವು ಬಾರಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಹೀಗೆ ಸಂಗ್ರಹಿಸಿದ ಮರಳು ಅಡ್ಡದಾರಿಗಳಿಂದ ನೇರವಾಗಿ ಮುಖ್ಯ ರಸ್ತೆಗಳಿಗೆ ಸೇರುತ್ತದೆ. ಅಲ್ಲಿಂದ ನೇರವಾಗಿ ಗದಗ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಅಕ್ರಮ ಮರಳನ್ನು ಟಿಪ್ಪರ್‌ಗಳ ಮೂಲಕ ಸಾಗಿಸಲಾಗುತ್ತಿದೆ. ಹಲವಡೆ ಅಧಿಕಾರಿಗಳು ದಾಳಿ ಮಾಡಿದ್ರೂ ಮಾಹಿತಿ ಮಾತ್ರ ಹೊರಬರುತ್ತಿಲ್ಲ. ಇನ್ನು ಕೆಲವಡೆ ಅಧಿಕಾರಿಗಳು ದಾಳಿ ಮಾಡಿದ ಸ್ಥಳದಲ್ಲಿ ಮರಳು ಜಪ್ತಿ ಮಾಡಲಾಗುತ್ತಿದೆ. ಆದರೆ ಮಾಹಿತಿ ಮಾತ್ರ ಸಿಗುತ್ತಿಲ್ಲ.
ಕಾರಟಗಿ, ಕನಕಗಿರಿ, ಕಿನ್ನಾಳ ಹಾಗೂ ಮಾದಿನೂರು ಪ್ರದೇಶದಲ್ಲಿ ಅತಿ ಹೆಚ್ಚು ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ದಾಳಿ ಮಾಡಿದ ಮರುದಿನವೇ ಮತ್ತೆ ಮರಳನ್ನು ಸಾಗಾಟ ಮಾಡಲಾಗುತ್ತದೆ. ಕಳೆದ ಎರಡು ದಿನಗಳ ಹಿಂದೆ ಸುಮಾರು 280 ಮೆಟ್ರಿಕ್ ಟನ್ ಮರಳನ್ನು ಸರ್ಕಾರದ ಸ್ಥಳಗಳಲ್ಲಿ ಸ್ಟಾಕ್ ಮಾಡಲಾಗಿತ್ತು. ಕಳೆದ ತಿಂಗಳು ಇದೆ ಸ್ಥಳದಲ್ಲಿ 290 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ ಮಾಹಿತಿ ಹೊರ ಬಂದಿರಲಿಲ್ಲ. ದಾಳಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಜಿ ಬಿ ಮಜ್ಜಿಗಿ ಹಾಗೂ ಭೂವಿಜ್ಞಾನಿ ಅಧಿಕಾರಿ ರೂಪ ಸಿ ಎಚ್ ಅವರು ದಾಳಿ ಮಾಡಿ ಮರಳು ಜಪ್ತಿ ಮಾಡಿದ್ದಾರೆ.
ಆದರೆ ಇಲ್ಲಿ ಅನುಮಾನ ಮೂಡುತ್ತಿರುವುದು, ಮರಳು ಅಕ್ರಮ ದಂಧೆ ಮಾಡುವ ಕಿಲಾಡಿಗಳಿಗೆ ಸರ್ಕಾರಿ ಜಾಗದಲ್ಲಿ ಡಂಪ್ ಮಾಡುವ ಐಡಿಯಾ ಹೇಳಿಕೊಟ್ಟವರು ಯಾರು? ದಾಳಿ ಮಾಡಿದರೂ ಪದೆ ಪದೇ ನದಿ ಹಳ್ಳಗಳನ್ನು ಅಗೆದು ಇದೇ ಜಾಗದಲ್ಲಿ ಮರಳುಗಾರಿಕೆ ಮಾಡುತ್ತಿರುವ ಆ ಪ್ರಭಾವಿಗಳು ಯಾರು? ಪೊಲೀಸರೂ ಕಠಿಣ ಕ್ರಮಗಳಿಗೆ ಮುಂದಾಗದ್ದಕ್ಕೆ ಕಾರಣಗಳೇನು? ಇಂಥ ಹಲವಾರು ಅನುಮಾನದ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದ್ದು, ಕಡಿವಾಣ ಹಾಕಲು ಒತ್ತಾಯಿಸಿದ್ದಾರೆ.