ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ
ಕೊರೊನಾ ಲಸಿಕೆ ತಯಾರಿಕೆ ಘಟಕಗಳಿಗಿಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಿದ್ದಾರೆ.
ಅವರು ಪುಣೆಯ ಫಾರ್ಮಾ ದೈತ್ಯ ಸಿರಮ್ ಇನ್ಸ್ಟಿಟ್ಯೂಟ್, ಅಲಹಾಬಾದ್ ನ ಜೈಡಸ್ ಕ್ಯಾಡಿಲಾ ಹಾಗೂ ಹೈದರಾಬಾದ್ ನ ಭಾರತ್ ಬಯೋಟೆಕ್ ಫಾರ್ಮಾ ಲಸಿಕೆ ತಯಾರಿಸುವ ಘಟಕಗಳಿಗೆ ಭೇಟಿ ಕೊಟ್ಟು , ವ್ಯಾಕ್ಸಿನ್ ಅಭಿವೃದ್ಧಿ ಮತ್ತು ತಯಾರಿಕೆ ಬಗ್ಗೆ ಪರಿಶೀಲಿಸಲಿದ್ದಾರೆ.
ಗುಜರಾತ್ ಗೆ ಇಂದು ಭೇಟಿ ನೀಡಲಿರುವ ಮೋದಿ, ಬೆಳಗ್ಗೆ 9.30 ಕ್ಕೆ ಅಲಹಾಬಾದ್ ನ ಜೈಡಸ್ ಕ್ಯಾಡಿಲಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಘಟಕವು ಅಲಹಾಬಾದ್ ನ ಚಾಂಗೋದಾರ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿದೆ. ತನ್ನ ಕೊರೊನಾ ZyCoV-D ನ ಮೊದಲ ಹಂತದ ಪರೀಕ್ಷೆ ಮುಗಿಸಿದ್ದಾಗಿ ತಿಳಿಸಿತ್ತು. ಅಲ್ಲದೇ, ಸಂಸ್ಥೆ ಅಗಸ್ಟ್ ನಿಂದ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭಿಸಿರುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬುದರ ಬಗ್ಗೆ ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ.
ಅದರಂತೆ, ಮಧ್ಯಾಹ್ನ 1.30 ಕ್ಕೆ ಪುಣೆಯಲ್ಲಿರುವ ಸೀರಮ್ ಇನ್ಸ್ಟಿಟ್ಯೂಟ್ ಗೆ ಭೇಟಿ ಕೊಟ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಬಗ್ಗೆ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ನಂತರ ತೆಲಂಗಾಣದ ಭಾರತ್ ಬಯೋಟೆಕ್ ಸಂಸ್ಥೆಗೆ ತೆರಳಲಿದ್ದಾರೆ. ಈ ವೇಳೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿರುವ ಕೋವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ, ಲಸಿಕೆ ತಯಾರಿಕೆ, ಸವಾಲುಗಳು ಮತ್ತು ದೇಶದ 130 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡಲು ರೋಡ್ ಮ್ಯಾಪ್ ಬಗ್ಗೆ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿಗೆ ವಿವರಣೆ ನೀಡಲಿದ್ದಾರೆ.