ವಿಜಯಸಾಕ್ಷಿ ಸುದ್ದಿ, ಮೈಸೂರು
ಕೊರೊನಾ ಲಾಕ್ ಡೌನ್ ನಡುವೆ ಮಾರಿ ಹಬ್ಬ ಆಚ್ಚರಿಸುತ್ತಿರುವುದನ್ನು ತಡೆಯಲು ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆಯ ಮೇಲೆಯೇ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಗ್ರಾಮದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಮಾರಿ ಹಬ್ಬ ಆಚರಿಸುತ್ತಿದ್ದರು. ಇದನ್ನು ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ ತಡೆಯಲು ಪ್ರಯತ್ನಿಸಿದ್ದರು. ಹೀಗಾಗಿ ಇದರಿಂದ ಕೋಪಗೊಂಡ ಗ್ರಾಮಸ್ಥರು, ಕಾರ್ಯಕರ್ತೆಯ ಮನೆಗೆ ನುಗ್ಗಿ ಮಂಗಳಗೌರಿ ಸೇರಿದಂತೆ ಅವರ ಸಹೋದರಿ ಸರೋಜಮ್ಮ, ಪುತ್ರ ಶರತ್ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇದರಿಂದ ಅವರಿಗೆ ಗಾಯವಾಗಿವೆ.
ಹೊಸೂರು ಗ್ರಾಮದಲ್ಲಿ ನಿನ್ನೆ ಗ್ರಾಮ ದೇವತೆಯ ಹಬ್ಬವಿತ್ತು. ಹೀಗಾಗಿ ದೇವಾಲಯದ ಮುಂಭಾಗದಲ್ಲಿ ಮೇಕೆ ಬಲಿ ಕೊಡುವ ಮೂಲಕ ಹಬ್ಬ ಆಚರಿಸಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ, ಸದ್ಯ ರಾಜ್ಯದಲ್ಲಿ ಕೊರೊನಾ ಹರಡುತ್ತಿದೆ. ಗುಂಪುಗೂಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಜನ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.



