ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಾರ್ಮಿಕ ವಲಯಕ್ಕೆ ಕೊರೋನಾ ಪ್ಯಾಕೇಜ್ ನೀಡಿದಂತೆ ನಮಗೂ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಬಿಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮನೋಜ್ ಸ್ವಾಮಿ ಹಿರೇಮಠ ನೇತೃತ್ವದಲ್ಲಿ ಜಿಲ್ಲೆಯ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿದ ನೂರಾರು ಶಿಕ್ಷಕರು, ಬಿಇಒ ಸೋಮಶೇಖರಗೌಡ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ತಲುಪಿಸುವಂತೆ ತಿಳಿಸಿದರು.
ಈ ಕುರಿತು ಮಾತನಾಡಿದ ಮನೋಜ್ ಸ್ವಾಮಿ, ಕೊವಿಡ್ -19 ಬಂದ ನಂತರ ಅನೇಕ ವರ್ಗಗಳಿಗೆ, ಕಾರ್ಮಿಕರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಿರುವುದು ಶ್ಲಾಘನೀಯ, ಆದರೆ ಕೊವಿಡ್ -19 ಬಂದ ನಂತರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಖಾಸಗಿ ಶಾಲಾ ಶಿಕ್ಷಕರು ಸಂಬಳವಿಲ್ಲದ ಅಕ್ಷರಶಃ ಬೀದಿಗೆ ಬಂದಿರುವುದು ತಮ್ಮ ಗಮನಕ್ಕೂ ಬಂದಿದೆ. ರಾಜ್ಯದಲ್ಲಿ ಅನೇಕ ಕಡೆ ಅಕ್ಷರ ಕಲಿಸುವ ಶಿಕ್ಷಕರು ತಮ್ಮ ಜೀವನ ನಿರ್ವಹಣೆಗಾಗಿ ಬೀದಿ – ಬೀದಿಗಳಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ.
ಮನೆ ಬಾಡಿಗೆಗಾಗಿ ಕೂಲಿ ನಾಲಿ ಮಾಡುವ ಪರಿಸ್ಥಿತಿ ಬಂದಿರುವುದು ದುರಂತವೇ ಸರಿ. ತಮ್ಮ ನೇತೃತ್ವದ ಸರ್ಕಾರ ಬಂದಾಗಲೆಲ್ಲ ನೌಕರರ ಹಿತ ಕಾಪಾಡುತ್ತಿರುವುದು ಹೆಮ್ಮೆಯ ವಿಷಯ. ಆದರೆ ಈ ಕೊವಿಡ್ -19 ಅನುದಾನರಹಿತ ಶಿಕ್ಷಕರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ್ದು, ನಮ್ಮ ಸರ್ಕಾರದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಖಾಸಗಿ ಶಾಲಾ ಶಿಕ್ಷಕರ ಹಿತ ಕಾಪಾಡುತ್ತೀರಿ ಎನ್ನುವ ನಂಬಿಕೆಯಿದ್ದು ಮಾರ್ಚ ತಿಂಗಳಿನಿಂದ ಇಲ್ಲಿಯವರೆಗೆ ಮತ್ತು ಮುಂದೆ ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂದು ಬಕಪಕ್ಷಿಯಂತೆ ಕಾಯುತ್ತಿರುವ ಖಾಸಗಿ ಶಿಕ್ಷಕರಿಗೆ / ಶಿಕ್ಷಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಬೊಗೇಶ್ ದೇಶಪಾಂಡೆ, ಸಹ ಕಾರ್ಯದರ್ಶಿ ವೀರುಪಾಕ್ಷಗೌಡ ಪೊಲೀಸ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಕರುಣಾಕರ್ ಹೂಗಾರ, ಪದಾಧಿಕಾರಿಗಳಾದ ಹುಲಗಪ್ಪ.ಎ, ಬಸವರಾಜ ಕುಂಬಾರ್, ಸಿದ್ದಯ್ಯ ಹಿರೇಮಠ, ಸಿದ್ದಯ್ಯ ತೊಂಡಿಹಾಳ್, ಕೃಷ್ಣ ಜೋಷಿ, ಅನಿಲ್ ಕುಮಾರ್.ಕೆ, ಪ್ರದೀಪ್, ಕೆಂಚಪ್ಪ, ಪ್ರವೀಣಕುಮಾರ್, ಸೋಮಶೇಖರ್, ಕನಕಾಚಲ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು..
ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಶಿಕ್ಷಕರಿಗೂ ಪ್ಯಾಕೇಜ್ ಘೋಷಿಸಿ
Advertisement