ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ ಪರಿಸರ ಲೇಔಟ್ ನಲ್ಲಿ ನೂತನ ಬಿಜೆಪಿ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆಯಲ್ಲಿಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದು, ನಗರವು ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲೇಕ್ಸ್, ಬ್ಯಾನರ್ ಅಳವಡಿಸಿ ತೆಂಗಿನಗರಿ ಕಟ್ಟಿ ಸಿಂಗಾರಗೊಳಿಸಿದ್ದಾರೆ. ಅಲ್ಲಲ್ಲಿ ಬಿಜೆಪಿ ಭಾವುಟ ರಾರಾಜಿಸುತ್ತಿವೆ. ನಗರದ ಜಿಲ್ಲಾಧಿಕಾರಿ ಭವನದ ಹತ್ತಿರವಿರುವ ಪರಿಸರ ಲೇಔಟ್ ನಲ್ಲಿ ವೇದಿಕೆ ಸಿದ್ಧಗೊಳಿಸಲಾಗಿದೆ.
ಗ್ರಾಮ ಪಂಚಾಯತಿ ಚುನಾವಣೆ ಹೊಸ್ತಿಲ್ಲಲ್ಲಿ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಭೇಟಿ ನೀಡುತ್ತಿದ್ದು, ಚುನಾವಣಾ ಕಣದಲ್ಲಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬಲ ತಂದುಕೊಟ್ಟರೆ, ನಾಯಕರಿಗೆ ಹುರುಪು ನೀಡಲಿದೆ ಎನ್ನಲಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಗ್ರಾ.ಪಂ.ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿ ಶಿಲಾನ್ಯಾಸ ನೆಪದಲ್ಲಿ ನಳೀನ್ ಕುಮಾರ್ ಅವರನ್ನು ಕರೆಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಗೋ ಪೂಜೆ ಮಾಡುವ ಮೂಲಕ ನೂತನ ಬಿಜೆಪಿ ಜಿಲ್ಲಾ ಕಚೇರಿಯ ಭೂಮಿಪೂಜೆ ನೆರವೇರಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ ಸೇರಿದಂತೆ ಹಲವರಿದ್ದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹಲವು ಸಚಿವರು, ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ.