ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಅಂಧ, ಅನಾಥರ ಬಾಳಿಗೆ ಬೆಳಕಾಗಿದ್ದ ಸಂಗೀತ ಸಾಮ್ರಾಟ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಸಂಗೀತ ಲೋಕದಲ್ಲಿ ಮಾಡಿದ ಸಾಧನೆ ಅಪ್ರತಿಮವಾಗಿದ್ದು, ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಗದಗ-ಬೆಟಗೇರಿ ರೈಲ್ವೇ ನಿಲ್ದಾಣಕ್ಕೆ ಡಾ. ಪುಟ್ಟರಾಜ ಗವಾಯಿಗಳ ಹೆಸರನ್ನು ಇರಿಸುವಂತೆ ರೈಲ್ವೇ ಇಲಾಖೆಗೆ ಶಿಫಾರಸ್ಸು ಮಾಡಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ನೀಡಿದರು.
ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸದ್ಗುರು ಸಿದ್ದಾರೂಢ ಸ್ವಾಮೀಜಿ ಅವರ ನಾಮಕರಣ ಮಾಡಿದ್ದು, ಅದೇ ಮಾದರಿಯಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಲಿಂ. ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಹೆಸರನ್ನು ಇರಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರಾದ ಬಸವಣ್ಣೆಯ್ಯ ಹಿರೆಮಠ, ಮಹೇಶ ದಾಸರ, ವೆಂಕಟೇಶ ಬೇಲೂರ, ಸಹದೇವ ಬಂಡಿ, ಯಲ್ಲಪ್ಪಣ್ಣ ತೇರದಾಳ, ಪರಶುರಾಮ ಬಂಕದ, ತಿಮ್ಮಣ್ಣ ಡೊಣಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಶಿವಬಸವ ಜನಕಲ್ಯಾಣ ಸಂಸ್ಥೆ, ಸೋಮೇಶ್ವರಯ್ಯ ಹಿರೇಮಠ ಜನಕಲ್ಯಾಣ ಪ್ರತಿಷ್ಠಾನ, ನಾಗಾವಿ, ವೆಂಕಟೇಶ ದಾಸರ ಅಭಿಮಾನಿಗಳ ಬಳಗ, ಕರ್ನಾಟಕ ರಾಜ್ಯ ರೈಲ್ವೇ ಹೋರಾಟ ಸಮಿತಿ, ಗದಗ ಬೋವಿ ಸಮಾಜದ ಮುಖಂಡರು ಮನವಿ ನೀಡಿದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಪ್ರಥಮ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಬಿ. ಶ್ರೀರಾಮುಲು, ಸಂಸದರಾದ ಶಿವಕುಮಾರ ಉದಾಸಿ ಹಾಗೂ ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ ಅವರನ್ನು ಸನ್ಮಾನಿಸಿ, ಸಾಧನೆಯ ಹರಿಕಾರ ನರೇಂದ್ರ ಮೋದಿ ಅವರನ್ನು ಕುರಿತ ಗ್ರಂಥವನ್ನು ನೀಡಿ ಗೌರವಿಸಿದರು.
ಮಂಜುನಾಥ ಶಾಂತಗಿರಿ, ಕೃಷ್ಣಾ ಜಾಧವ, ಅಡಿವೆಪ್ಪ ಬಾಗಲಕೋಟಿ, ಜಗದೀಶ ಕಟ್ಟಿಮನಿ, ದೇವು ಕಟಗಿ, ಸುನೀಲ ನಿಡಗುಂದಿ, ದ್ಯಾಮಣ್ಣ ಹುನಗುಂದ, ಹನಮಂತ ಗೊಜನೂರ, ಪರಶುರಾಮ ಬಂಕದಮನಿ, ಶ್ರೀನಿವಾಸ ಖಟವಟೆ, ಶಂಕರ ಸಿದ್ಲಿಂಗ್, ಚಂದ್ರಶೇಖರ ಬ್ಯಾಹಟ್ಟಿ, ಕುಮಾರಗೌಡ ಪಾಟೀಲ ಉಪಸ್ಥಿತರಿದ್ದರು.
ಗದಗ ರೈಲ್ವೆ ನಿಲ್ದಾಣಕ್ಕೆ ಪುಟ್ಟರಾಜರ ಹೆಸರಿಡಲು ಮನವಿ
Advertisement