ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಗುಜರಾತ್‌ನ ಆನಂದ್ ಜಿಲ್ಲೆಯ ರಾಜ್ಯಪಾಲರ ಸ್ವಗ್ರಾಮ ಲಂಬಾವೇಲಾದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯನ ದೇಗುಲಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆ ಹಾಗೂ ಹನುಮ ಮೂರ್ತಿಯನ್ನು ರಾಜ್ಯಪಾಲ ವಜೂಭಾಯಿ ರೂಢಬಾಯಿ ವಾಲಾ ತೆಗೆದುಕೊಂಡು ತೆರಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಮಭಕ್ತರು ಎಷ್ಟಿದ್ದಾರೊ, ಅಷ್ಟೇ ಹನುಮಭಕ್ತರೂ ಇದ್ದಾರೆ. ಅಂತೆಯೇ ಹನುಮನಿಗೆ ನಿತ್ಯಪೂಜೆ, ಭಕ್ತಕೋಟಿ ನಡೆದುಕೊಳ್ಳುತ್ತಾರೆ. ನಮ್ಮ ಸ್ವಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯನ ದೇವಸ್ಥಾನಕ್ಕೆ ಹನುಮ ಜನಿಸಿದ ಸ್ಥಳ ಅಂಜನಾದ್ರಿಯ ಶಿಲೆ, ಮೂರ್ತಿಯನ್ನು ಒಯ್ಯಲಾಗುತ್ತಿದೆ ಎಂದರು.
ನಿನ್ನ ಕೆಲಸವನ್ನು ನಿಷ್ಕಲ್ಮಶವಾಗಿ ಮಾಡು, ಪ್ರತಿಫಲವನ್ನು ಭಗವಂತನಿಗೆ ಬಿಡು ಎನ್ನುವುದಕ್ಕೆ ಮಾರುತಿ ಸಾಕ್ಷಿ. ಇಲ್ಲಿನ ಅಂಜನಾದ್ರಿ ಪೂಜಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಇಲ್ಲಿನ ಆಡಳಿತ ಅದನ್ನು ಬಗೆ ಹರಿಸುತ್ತದೆ ಎಂದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಡಿ. ಶ್ರೀಧರ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಇದ್ದರು.