ಗ್ರಾಹಕರ ಶೋಷಣೆ ನಿಯಂತ್ರಣಕ್ಕೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಮಾಹಿತಿಯ ಅರಿವು ಅಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ವ್ಯಾಪಾರ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕರು ಜಾಗೃತರಾಗಿರುವಂತೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲಿ ಹೇಳಿದರು.

ಗದಗ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ಯಾವುದೇ ವಸ್ತು ಖರೀದಿಯಲ್ಲಿ ವಂಚನೆ ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದಾಗಿದೆ. ಅನೇಕ ಸಂದರ್ಭದಲ್ಲಿ ಗ್ರಾಹಕರು ಅವಶ್ಯಕ ಜ್ಞಾನದ ಕೊರತೆಯಿಂದಾಗಿ ವ್ಯಾಪಾರ ಸಂಸ್ಥೆಗಳಿಂದ ಶೋಷಣೆಗೊಳಪಟ್ಟು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲಾಗುತ್ತಿಲ್ಲ. ಈ ಕುರಿತು ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಮಾಹಿತಿಯನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಲು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಮಾತನಾಡಿ, ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, ಬೆಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಹಾಗೂ ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕು. ಇಂದು ವ್ಯಾಪಾರಸ್ಥರು ತಮ್ಮ ಸ್ವಂತ ಲಾಭಕ್ಕಾಗಿ ಸರಕಿನ ಮೂಲ ಗುಣ ಮಟ್ಟದಲ್ಲಿ ವ್ಯತ್ಯಾಸ ಮಾಡುವದರ ಮೂಲಕ ಗ್ರಾಹಕರನ್ನು ಶೋಷಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೆ ಅದಕ್ಕೆ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು. ತಾವು ಖರೀದಿಸಿದ ವಸ್ತುವಿನಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಲ್ಲಿ ದೂರು ದಾಖಲಿಸಲು ರಶೀದಿ ಅವಶ್ಯಕವಾಗಿದೆ ಎಂದರು.

ಮಾರುಕಟ್ಟೆಯಲ್ಲಿನ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಯಿಂದ ರಕ್ಷಣೆ ಪಡೆಯಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕಾನೂನುಗಳು ಜಾರಿಯಲ್ಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಬಿ.ಎಸ್.ಕೇರಿ ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೆ ರಶೀದಿ ಪಡೆಯಬೇಕು. ಒಂದು ವೇಳೆ ಖರೀದಿಸಿದ ವಸ್ತುಗಳ ಬಾಳಿಕೆ ನಿಗದಿತ ಅವಧಿಯೊಳಗೆ ನ್ಯೂನತೆಗಳೇನಾದರು ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಬಹುದಾಗಿದೆ. ಹೊಸದಾಗಿ ಜಾರಿಗೊಂಡ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಅನ್ವಯ ಎರಡು ಕಡೆಯ ಕಕ್ಷಿದಾರರ ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಪಡಿಸಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸಮೀಉನ್ನಿಸಾ. ಸಿ.ಎಚ್. ಮಾತನಾಡಿ, ಹೊಸದಾಗಿ ಜಾರಿಗೊಂಡ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಅನ್ವಯ ಗ್ರಾಹಕರ ರಕ್ಷಣಾ ವೇದಿಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಾಗಿ ಬದಲಾಗಿದೆ. ಈ ಕಾಯ್ದೆಯಡಿ ಗ್ರಾಹಕರು ಯಾವುದೇ ಭಾಗದಿಂದ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದಾಗಿದೆ. ದೂರದಾರರು ಆನಲೈನ್ ಮೂಲಕವು ದೂರು ದಾಖಲಿಸಿ ಶೀಘ್ರವೇ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿರುವ ಕಾನೂನುಗಳನ್ನು ಇಂದಿನ ಯುವಜನತೆ ವಿಧ್ಯಾರ್ಥಿಗಳು ಅರಿತು ಕೊಂಡು ಜಾಗೃತರಾಗಿ ಇತರರಲ್ಲೂ ಜಾಗೃತಿ ಮೂಡಿಸಲು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವಿಶ್ರಾಂತ ಸದಸ್ಯ ಎಫ್.ಪಿ.ಲಕ್ಷ್ಮೇಶ್ವರಮಠ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಹೊಸ ವೈಶಿಷ್ಟ್ಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ, ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಆರ್.ಕೆ.ಕೊಪ್ಪರ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಮ್ಮಣ್ಣವರ, ಆ.ನಾ.ಸ. ಮತ್ತು ಗ್ರಾ.ವ್ಯ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ದೊಡಮನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ ವ್ಯವಸ್ಥಾಪಕಿ ಗಿರಿಜಮ್ಮ ಹಿರೇಮಠ, ಕಾಲೇಜು ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ರಾಜೇಂದ್ರ ಗಡಾದ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಪ್ರಯುಕ್ತ ಜರುಗಿಸಲಾದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮನಾ ವಿತರಿಸಲಾಯಿತು.

ಪ್ರಾತ್ಯಕ್ಷತೆ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಗ್ರಾಹಕರ ಜಾಗೃತಿಗಾಗಿ ಆಹಾರ ಕಲಬೆರೆಕೆ, ಆಹಾರ ಸುರಕ್ಷತೆ ಹಾಗೂ ಆಹಾರ ಕಲಬೆರೆಕೆ, ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ವಸ್ತು ಪ್ರದರ್ಶನ ಹಾಗೂ ಎಲ್.ಪಿ.ಜಿ. ಸುರಕ್ಷತೆ ಕುರಿತು ಪ್ರಾತ್ಯಕ್ಷಿಕತೆ ಜರುಗಿತು.


Spread the love

LEAVE A REPLY

Please enter your comment!
Please enter your name here