ವಿಜಯಸಾಕ್ಷಿ ಸುದ್ದಿ, ಗದಗ:
ಅಸ್ಪೃಶ್ಯತೆ ನಮ್ಮ ದೇಶಕ್ಕೆ ದೊಡ್ಡ ಕಳಂಕ.
ಅಂಬೇಡ್ಕರ್ ಇದಕ್ಕಾಗಿಯೇ ಜೀವನ ಸಮರ್ಪಿಸಿದ ಮಹಾನ್ ವ್ಯಕ್ತಿ. ಅದರಂತೆ, ಅಸ್ಪೃಶ್ಯತೆ ಹೊಡೆದೋಡಿಸಲು ಬ್ರಾಹ್ಮಣ ಸ್ವಾಮಿಜೀಗಳಾದ ಪೇಜಾವರ ಶ್ರೀಗಳು ಮುಂದಾಗಿದ್ದರು. ಆದರೆ, ಹಂಸಲೇಖ ಸ್ವರ್ಗಸ್ತರಾದ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿರುವುದು ಎಷ್ಟು ಸರಿ? ಸ್ವಾಮಿಗಳು ಮಾಂಸ ತಗೋಬೇಕೆಂದು ಹೇಳಿದ್ದು ಅಂತ್ಯಂತ ಹೀನವಾದದ್ದು.
ಅಲ್ಲದೇ, ಹಂಸಲೇಖ ವಿಕೃತಿಯಿಂದ ಮಾತನಾಡಿರುವುದನ್ನು ನೋಡಿದರೆ ಒಳಗೆ ಏನೇನೋ ತುಂಬಿಕೊಂಡಿದ್ದಾರೆ ಎಂದು ಹಂಸಲೇಖ ವಿರುದ್ಧ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹರಿಹಾಯ್ದರು.
ಇಂದು ಗದಗ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಂಸಲೇಖ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಕ್ಷೇತ್ರ ಏನು? ನೀವು ಮಾತನಾಡಿದ ವಿಷಯ ಏನು? ನಿಮ್ಮ ಹೇಳಿಕೆ ನಂತರ ನಿಮ್ಮ ಹೆಂಡತಿ ಬೈದರೆಂದು ಹೇಳಿದಿರಿ. ಅವರು ನಿಮ್ಮನ್ನ ಒದ್ದು ಹೊರಗೆ ಹಾಕಬೇಕಿತ್ತು. ಇಷ್ಟು ವಯಸ್ಸಾಗಿದೆ ಏನು ಮಾತನಾಡಬೇಕೆಂಬ ಬಗ್ಗೆ ಬುದ್ಧಿ ಇಲ್ವಾ? ಎಂದು ಪ್ರಶ್ನಿಸಿದ ಅವರು ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋದು ಸರಿಯಲ್ಲ ಎಂದು ಕಿಡಿಕಾರಿದರು.
ನಿಮ್ಮ ಮನಸ್ಸಲ್ಲಿ ಕಸ, ಕಲ್ಮಶ ತುಂಬಿಕೊಂಡಿದೆ.
ಕಸ ತೆಗೆದು ಹಾಕಿ ಸ್ವಾಮೀಜಿಗಳ ಕೆಲಸವನ್ನು ಸ್ವಾಗತ ಮಾಡಬೇಕು. ಈ ರೀತಿ ಇನ್ನಷ್ಟು ಗೊಂದಲ ಸೃಷ್ಟಿಸುವುದು ಶೋಭೆ ತರುವುದಿಲ್ಲ. ಈ ರೀತಿ ಇನ್ನೊಮ್ಮೆ ಹೇಳಿಕೆ ನೀಡಿದರೆ ತಕ್ಕ ಉತ್ತರ ಕೊಡಬೇಕಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಹಂಸಲೇಖ ಅವರಿಗೆ ಎಚ್ಚರಿಕೆ ನೀಡಿದರು.



