HomeGadag Newsಮರಳು ದಂಧೆ: ಗ್ರಾ.ಪಂ. ಅಧ್ಯಕ್ಷರ ಪುತ್ರನಿಗೆ ದಂಡ!

ಮರಳು ದಂಧೆ: ಗ್ರಾ.ಪಂ. ಅಧ್ಯಕ್ಷರ ಪುತ್ರನಿಗೆ ದಂಡ!

Spread the love

  • ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಗ್ರಾಪಂ ಅಧ್ಯಕ್ಷರ ಟ್ರ್ಯಾಕ್ಟರ್ ವಶ
  • ಗಣಿ ಇಲಾಖೆಗೆ ಅಧ್ಯಕ್ಷರಿಂದ ದಂಡ ಕಟ್ಟಿಸಿ ಬಿಸಿ ಮುಟ್ಟಿಸಿದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ:

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸ ಮರಳು ನೀತಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ಗ್ರಾಮ ಪಂಚಾಯತಿ ಬೊಕ್ಕಸಕ್ಕೆ ಕನ್ನ ಹಾಕಿ ಕೆಲವು ದಿನಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಗದಗ ತಾಲೂಕಿನ ಚಿಂಚಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಪುತ್ರನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಸೋಮವಾರ ಪುರದಹಳ್ಳದಲ್ಲಿ ಮರಳು ತುಂಬಿಕೊಂಡು ಚಿಂಚಲಿ-ಹುಬ್ಬಳ್ಳಿ ರಸ್ತೆಯ ಹೊನ್ನಿಗುಡ್ಡದ ಹತ್ತಿರ ಹೋಗುತ್ತಿದ್ದ ಟ್ರ್ಯಾಕ್ಟರ್ ವಶಪಡಿಸಿಕೊಂಡ ಮುಳಗುಂದ ಠಾಣೆಯ ಪೊಲೀಸರು 19,240 ರೂ. ದಂಡ ವಿಧಿಸಿದ್ದಲ್ಲದೆ, ಅಕ್ರಮ ಮರಳು ದಂಧೆ ಮಾಡದಂತೆ ಅಧ್ಯಕ್ಷರ ಮಗನಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಹಲವು ವರ್ಷಗಳಿಂದ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಅಧ್ಯಕ್ಷರ ಮಗ ಕೋಳಿವಾಡ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿ ಪ್ರತಿವರ್ಷ ನೂರಾರು ಟ್ರ್ಯಾಕ್ಟರ್ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಈ ಹಿಂದೆಯೂ ಈತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ನಿರಂತರವಾಗಿ ಮರಳು ದಂಧೆ ನಡೆಸುತ್ತಿದ್ದ. ಅಲ್ಲದೆ, ಅಧ್ಯಕ್ಷರ ಮಗನ ಮರಳು ದಂಧೆಗೆ ಸುತ್ತಮುತ್ತಲಿನ ಗ್ರಾಮಗಳ ಹಲವು ಕುಳಗಳು ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಇನ್ನು ಅಧ್ಯಕ್ಷ ಹುದ್ದೆಯನ್ನೇ ದುರುಪಯೋಗ ಪಡಿಸಿಕೊಂಡು ಅಕ್ರಮ ಮರಳು ದಂಧೆ ನಡೆಸುತ್ತಿರುವುದಷ್ಟೇ ಅಲ್ಲದೆ, ಗ್ರಾ.ಪಂ.ನ ಲಕ್ಷಾಂತರ ರೂ. ಹಣ ಲೂಟಿ ಹೊಡೆದಿದ್ದಾರೆ. ಇದಕ್ಕೆ ಕಲ್ಲೂರ ಗ್ರಾಮದ ಎರಡನೇ ವಾರ್ಡ್‌ನ ಗ್ರಾಪಂ ಸದಸ್ಯನೂ ಸಾಥ್ ನೀಡುತ್ತಿದ್ದಾನೆ. ಇದೆಲ್ಲ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥ ಪ್ರಕಾಶ್ ನೀಲಣ್ಣವರ ಆರೋಪಿಸಿದರು.

ಹೊಸ ಮರಳು ನೀತಿ ಹೇಳುವುದೇನು?

ಜನಸಾಮಾನ್ಯರಿಗೂ ಮರಳು ಸುಲಭವಾಗಿ ಹಾಗೂ ಕೈಗೆಟಕುವ ದರದಲ್ಲಿ ಲಭ್ಯವಾಗಲೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮರಳು ನೀತಿಗೆ ಅನುಮೋದನೆ ನೀಡಿದೆ. 1, 2 ಮತ್ತು 3ನೇ ಶ್ರೇಣಿಯ ಹಳ್ಳ/ಹೊಳೆ ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮೂಲಕ ವಿಲೇವಾರಿ ಹಾಗೂ ನಿಯಂತ್ರಣಕ್ಕೆ ಹೊಸ ಮರಳು ನೀತಿ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಯಧನ ಶುಲ್ಕ (ರಾಯಲ್ಟಿ) 80 ರೂ., ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಶುಲ್ಕ 8 ರೂ. (ಪ್ರತಿ ಟನ್‌ಗೆ) ಹಾಗೂ 1.6 ರೂ. ತೆರಿಗೆ ಹಣ ಸೇರಿ 90 ರೂ. ಪಾವತಿಸಿಬೇಕು. ಆಗ ಜಿಲ್ಲಾಧಿಕಾರಿಗಳು ಒಂದು ವರ್ಷದವರೆಗೆ ಮರಳು ವಿಲೇವಾರಿ ಮಾಡಲು ಕಾರ್ಯಾದೇಶ ನೀಡುತ್ತಾರೆ. ಬಳಿಕ ಗ್ರಾ.ಪಂ. ಪ್ರತಿ ಟನ್‌ಗೆ 300 ರೂ.ನಂತೆ ಮರಳು ಮಾರಾಟ ಮಾಡಬಹುದು. ಗಣಿ ಇಲಾಖೆಗೆ ಪಾವತಿಸಿ ಉಳಿಯುವ ಹಣವನ್ನು ಗ್ರಾ.ಪಂ. ತನ್ನ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವ್ಯವಸ್ಥಾಪಕ ವೀರನಗೌಡ ತಿಳಿಸಿದರು.

ಗದಗ ತಾಲೂಕು ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿಲ್ಲ. ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಪುರದಹಳ್ಳದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈಗಾಗಲೇ ಅಲ್ಲಿನವರಿಗೆ ಮಾಹಿತಿ ನೀಡಲಾಗಿದೆ. ನಮ್ಮ ಆರ್‌ಐ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸುತ್ತೇನೆ. ಅವರು ವರದಿ ನೀಡಿದ ಬಳಿಕ ಅಕ್ರಮವಾಗಿ ಸಂಗ್ರಹಿಸಿದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ಕಿಶನ್ ಕಲಾಲ್, ತಹಸೀಲ್ದಾರ್

ಸ್ಥಳಕ್ಕೆ ಭೇಟಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಗದಗ ಹಾಗೂ ಲಕ್ಷ್ಮೇಶ್ವರ ತಹಸೀಲ್ದಾರರ ಗಮನಕ್ಕೆ ತರುವುದಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು.

ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ

ಹೊಸ ಮರಳು ನೀತಿಯು ಗ್ರಾ.ಪಂ.ಗಳು ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ. ಆದರೆ, ಸರ್ಕಾರದ ನಿಯಮಾನುಸಾರ ಹಣ ಪಾವತಿಸಿ ಜನಸಾಮಾನ್ಯರಿಗೆ ಮರಳು ಕೊಡಿಸುವ ಮೂಲಕ ಗ್ರಾ.ಪಂ. ಬೊಕ್ಕಸ ತುಂಬಿಸಬೇಕಿರುವ ಗ್ರಾ.ಪಂ. ಅಧ್ಯಕ್ಷರೇ ತಮ್ಮ ಮಗನನ್ನು ಅಕ್ರಮ ಮರಳು ದಂಧೆಗೆ ಇಳಿಸಿರುವುದು ದುರಂತ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಲ್ಲೂರ, ಚಿಂಚಲಿ ವ್ಯಾಪ್ತಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ವಶಪಡಿಸಿಕೊಳ್ಳುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಚಂದ್ರಶೇಖರ್ ಆರ್.ಹರಿಜನ, ಗ್ರಾಪಂ ಸದಸ್ಯ

ನನ್ನ ಹೆಸರು ಯಲ್ಲಪ್ಪ ಅಲ್ಲ!
ಈ ಬಗ್ಗೆ ಅಧ್ಯಕ್ಷರ ಮಗನನ್ನು ಸಂಪರ್ಕಿಸಿದಾಗ, ‘ನನ್ನ ಹೆಸರು ಯಲ್ಲಪ್ಪ ಅಲ್ಲ. ಅದು ನನ್ನ ಚಿಕ್ಕಪ್ಪನ ಮಗನ ಹೆಸರು. ನನ್ನ ಹೆಸರು ಪ್ರವೀಣ್’ ಎಂದು ಚಿಂಚಲಿ ಗ್ರಾ.ಪಂ. ಅಧ್ಯಕ್ಷರ ಮಗನಾಗಿರುವ ಯಲ್ಲಪ್ಪ ಫಕ್ಕೀರಪ್ಪ ನೀಲಣ್ಣವರ ಅಲಿಯಾಸ್ ಪ್ರವೀಣ್ ಫಕ್ಕೀರಪ್ಪ ನೀಲಣ್ಣವರ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!