ಚುನಾವಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ: ಜಿಲ್ಲೆಯ 117 ಗ್ರಾಮ ಪಂಚಾಯತಿಗೆ ಮಾತ್ರ ಎಲೆಕ್ಷನ್

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ ಚುನಾವಣೆ ಘೋಷಿಸಿದ್ದು, ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಅಲ್ಲದೇ, ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ಜಿಲ್ಲೆಯಲ್ಲಿ ಒಟ್ಟು 122 ಗ್ರಾಮ ಪಂಚಾಯತಗಳಿದ್ದು, ಇವುಗಳ ಪೈಕಿ 117 ಗ್ರಾ.ಪಂ.ಗಳ 602 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ ಎಂದರು.

ಇನ್ನುಳಿದ ಜಿಲ್ಲೆಯ ಐದು ಗ್ರಾಮ ಪಂಚಾಯತಗಳಾದ ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರ, ಗದಗ ತಾಲ್ಲೂಕಿನ ಹರ್ಲಾಪುರ, ಗಜೇಂದ್ರಗಡ ತಾಲ್ಲೂಕಿನ ಕುಂಟೋಜಿ ಮತ್ತು ಶಾಂತಗಿರಿ, ಮುಂಡರಗಿ ತಾಲ್ಲೂಕಿನ ಮುರಡಿ ಗ್ರಾ.ಪಂ.ಗಳ ಅವಧಿ ಇನ್ನೂ ಮುಗಿಯದಿರದ ಕಾರಣ ಈ ಹಂತದಲ್ಲಿ ಚುನಾವಣೆ ಜರಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸದ್ಯ ಚುನಾವಣೆ ನಡೆಯುವ 117 ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 5,34,085 ಮತದಾರರು ಇದ್ದಾರೆ. ಅದರಲ್ಲಿ 2,70,245 ಜನ ಪುರುಷರು, 2,63,840 ಜನ ಮಹಿಳಾ ಮತದಾರರಿದ್ದಾರೆ.

ಜಿಲ್ಲೆಯ 117 ಗ್ರಾಮ ಪಂಚಾಯತಿಗಳ ಪೈಕಿ 53 ಗ್ರಾಮ ಪಂಚಾಯತಿಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಗದಗ ತಾಲ್ಲೂಕಿನ 26, ಲಕ್ಷೇಶ್ವರ 13, ಶಿರಹಟ್ಟಿ 14 ಸೇರಿ ಮೂರು ತಾಲ್ಲೂಕುಗಳ ಒಟ್ಟು 53 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಜರುಗಲಿದೆ.

ಅದರಂತೆ, ಎರಡನೇ ಹಂತದಲ್ಲಿ ಮುಂಡರಗಿ ತಾಲ್ಲೂಕಿನ 18, ಗಜೇಂದ್ರಗಡ 9, ನರಗುಂದ 13 ಹಾಗೂ ರೋಣ 24 ಸೇರಿ ನಾಲ್ಕು ತಾಲ್ಲೂಕುಗಳ ಒಟ್ಟು 64 ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದ ಚುನಾವಣೆಗೆ ಡಿ.7 ರಂದು ಅಧಿಕೃತ ಚುನಾವಣಾದೇಶ ಹೊರಡಿಸಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ. ಡಿ. 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆ ಹಿಂಪಡೆಯಲು ಡಿ.14 ಕಡೆಯ ದಿನವಾಗಿದೆ. ಮೊದಲ ಹಂತದ ಮತದಾನವು ಡಿ.22 ರಂದು ಜರುಗಲಿದೆ.

ಅದರಂತೆ, ಎರಡನೇ ಹಂತದ ಚುನಾವಣೆಗೆ ಡಿ.12 ರಂದು ಅಧಿಕೃತ ಚುನಾವಣಾ ಆದೇಶ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿದೆ. ಡಿ.17 ರಂದು ನಾಮಪತ್ರ ಪರಿಶೀಲನೆ ಜರುಗಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಡಿ.19 ಕಡೆಯ ದಿನವಾಗಿದೆ‌. ಡಿ.27 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಡಿ.31 ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸುದ್ದಿಗೋಷ್ಠಿಯಲ್ಲಿ ಇದ್ದರು.


Spread the love

LEAVE A REPLY

Please enter your comment!
Please enter your name here