ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಯುವ ಸಮೂಹವನ್ನು ನಿರುದ್ಯೋಗಕ್ಕೆ ದೂಡಿರುವ ಬಿಜೆಪಿ ಸರ್ಕಾರಗಳಿಗೆ ಪದವೀಧರರ ಚುನಾವಣೆಯ ಫಲಿತಾಂಶವು ಎಚ್ಚರಿಕೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬಂಕದ ಹೇಳಿದರು.
ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ದುರ್ಗಾವೃತ್ತ, ಸರಾಫ್ ಬಜಾರ್, ಈದ್ಗಾ ಮೈದಾನ ಸೇರಿ ವಿವಿಧ ಬಡಾವಣೆಗಳ ಪದವೀಧರರ ಬಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಪರವಾಗಿ ಮತಯಾಚಸಿ ಮಾತನಾಡಿದರು.
ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆ ಜತೆಗೆ ದೇಶದ ಯುವ ಸಮೂಹಕ್ಕೆ ಉದ್ಯೋಗ ನೀಡಬೇಕಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಯುವ ಸಮೂಹಕ್ಕೆ ನಿರುದ್ಯೋಗ ಭಾಗ್ಯ ನೀಡುತ್ತಿದೆ. ಪ್ರಶ್ನಿಸುವ ಜನತೆಗೆ ಯುವಕರು ಪಕೋಡ ಮಾರಿ ಎಂಬ ಉತ್ತರ ನೀಡುವ ಮೂಲಕ ಪದವೀಧರರ ನೌಕರಿ ಕನಸಿಗೆ ಕೊಳ್ಳಿ ಇಟ್ಟಿದೆ. ಬಹುಮತವಿದೆ ಎಂದು ಜನವಿರೋಧಿ ಹಾಗೂ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ಸುಗ್ರಿವಾಜ್ಞೆಗಳಿಂದ ತಿದ್ದುಪಡಿ ತರುತ್ತಿರುವ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಲು ಸಿಕ್ಕಿರುವ ಅವಕಾಶವನ್ನು ಪ್ರಜ್ಞಾವಂತ ಪದವೀಧರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಐವೈಸಿ ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲ್ ಕರ್ಣೆ ಹಾಗೂ ಉಮೇಶ ರಾಠೋಡ ಮಾತನಾಡಿ, ನಮ್ಮ ಜಿಲ್ಲೆಯವರು ಎಂದು ನೀಡಿದ್ದ ಅವಕಾಶವನ್ನು ಬಳಿಕೆ ಮಾಡಿಕೊಳ್ಳುವಲ್ಲಿ ಹಾಗೂ ಪದವೀಧರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಕನೂರ ಅವರು ವಿಫಲವಾಗಿದ್ದಾರೆ. ಸಂಘಟನೆ ಹಾಗೂ ಹೋರಾಟ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಅವರಿಗೆ ಅ. 28 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಲು ಪದವೀಧರರು ಉತ್ಸುಕವಾಗಿದ್ದಾರೆ ಎಂದರು.
ಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯಾಗಲಿ
Advertisement