ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು:ಕೊವಿಡ್ ತೀವ್ರತೆಯಿಂದ ಜನರು ಆತಂಕದಲ್ಲಿದ್ದರೆ, ರಾಜ್ಯದ ದೊರೆ ಎನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಸಂಪುಟ ವಿಸ್ತರಣೆಯ ಚಿಂತೆಯಲ್ಲಿ ಬ್ಯುಸಿಯಾಗಿದ್ದಾರೆ. ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದ ಎನ್ನುವಂತೆ ಆಗಿದೆ ರಾಜ್ಯದ ಸ್ಥಿತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಪ್ರತಿದಿನವೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ್ದು, ಕೊವಿಡ್‌ಗೆ 7,800 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೂ ಸರ್ಕಾರ ನಿರ್ಲಕ್ಷ್ಯ ತಾಳಿ, ಮುಗ್ಧ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಖಂಡ್ರೆ ಟೀಕಿಸಿದ್ದಾರೆ.
ಸಿನಿಮಾ ಮಂದಿರ, ಈಜುಕೊಳ ಹಾಗೂ ಶಾಲಾ ಕಾಲೇಜು ಹೊರತು ಪಡಿಸಿ ಉಳಿದೆಲ್ಲವನ್ನೂ ತೆರೆಯಲಾಗಿದೆ. ಅದು ಸರಿ, ಆದರೆ ಹೀಗೆ ಅನ್‌ಲಾಕ್ ಮಾಡಿ ಕೈ ತೊಳೆದುಕೊಂಡು ಕೂಡುವುದಲ್ಲ, ಬದಲಿಗೆ ಸೋಂಕು ಹರಡದಂತೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಮಾಡಬೇಕು. ಆದರೆ ರಾಜ್ಯ ಸರ್ಕಾರಕ್ಕೆ ಆ ಕಾಳಜಿಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಶನಿವಾರ ಒಂದೇ ದಿನ ದಾಖಲೆಯ 179 ರೋಗಿಗಳು ಕೊವಿಡ್‌ಗೆ ಬಲಿಯಾಗಿದ್ದಾರೆ. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಬರೀ ಸಾವಿನ ಸುದ್ದಿಗಳೇ ಬರುತ್ತಿವೆ. ಈ ಹಂತದಲ್ಲಿ ಶಾಲೆ ಕಾಲೇಜು ತೆರೆಯುವ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಹುಡುಗಾಟವಾಡುತ್ತಿದೆ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕೊವಿಡ್ ನಿಯಂತ್ರಿಸಲು ನೇಮಕಗೊಂಡಿದ್ದ ಅಷ್ಟ ದಿಕ್ಪಾಲಕರು ಏನು ಮಾಡುತ್ತಿದ್ದಾರೆ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಜನರ ಸಂಕಷ್ಟ ಇವರಿಗೆ ಕಾಣುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರ ಸಂಪೂರ್ಣ ಕೈಚೆಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವ ಮೂಲಕ ಮತ್ತು ಶುಚಿತ್ವ ಕಾಪಾಡಿಕೊಂಡು ತಮ್ಮ ಆರೋಗ್ಯ ತಾವೇ ಕಾಪಾಡಿಕೊಳ್ಳಬೇಕು ಖಂಡ್ರೆ ಮನವಿ ಮಾಡಿದ್ದಾರೆ.