ವಿಜಯಸಾಕ್ಷಿ ಸುದ್ದಿ, ನವದೆಹಲಿ
ಕೋವಿಡ್ -19 ಸೋಂಕಿನ ಹಾವಳಿಯಿಂದಾಗಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಒ) ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ನ್ನು 2021 ಜನವರಿ ಅಂತ್ಯಕ್ಕೆ ಮುಂದೂಡಿದೆ.
ಕೋವಿಡ್ ಉಂಟು ಮಾಡಿರುವ ಸದ್ಯದ ಪರಿಸ್ಥಿತಿಯಲ್ಲಿ ಚಾಂಪಿಯನ್‌ಶಿಪ್ ನಡೆಸುವುದು ಕಷ್ಟ. ಹಾಗಾಗಿ ಒಂದು ತಿಂಗಳು ಮುಂದೂಡಬೇಕಾಯಿತು ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ನುಡಿದಿದ್ದಾರೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಡಿ.18 ರಿಂದ 20 ರವರೆಗೆ ಈ ಬಾರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಆಯೋಜಿಸಲು ನಿರ್ಧರಿಸಲಾಗಿತ್ತು. ಟೂರ್ನಿ ಆಯೋಜನೆಗೆ ಇನ್ನಷ್ಟು ರಾಜ್ಯಗಳು ಬಯಸಿದರೆ, ಸ್ಥಳ ಬದಲಾಗಬಹುದು ಎಂದು ವಿನೋದ್ ತೋಮರ್ ಹೇಳಿದ್ದಾರೆ.
ಸರ್ಬಿಯಾದ ಬಿಲ್ ಗ್ರೇಡ್ ನಲ್ಲಿ ಡಿ.12 ರಿಂದ 18 ರವರೆಗೆ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಿ ಕೊಡಲಾಗುವುದು ಎಂದು ಡಬ್ಲ್ಯುಎಫ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್ ಗೆ ಆಯ್ಕೆ ಟ್ರಯಲ್ಸ್ ನಡೆಸದಿರಲು ತೀರ್ಮಾನಿಸಲಾಗಿದೆ.ಅದೇ ತಂಡವನ್ನು ಬೆಲ್ ಗ್ರೇಡ್ ಗೆ ಕಳುಹಿಸಲಾಗುವುದು.
ಬಜರಂಗ್ ಪುನಿಯಾ(65 ಕೆಜಿ ವಿಭಾಗ), ವಿನೇಶ್ ಪೋಗಟ್ (ಮಹಿಳೆಯರ 53 ಕೆಜಿ ವಿಭಾಗ), ಜೀತೆಂದರ್ ಕುಮಾರ್ (74 ಕೆಜಿ ವಿಭಾಗ) ಹಾಗೂ ಸೋಮವೀರ್ ರಾಠೆ (92 ಕೆಜಿ ವಿಭಾಗ) ಅವರು ಟೂರ್ನಿಯಲ್ಲಿ ಭಾಗವಹಿಸದಿರಲು ಅನುಮತಿ ಕೇಳಿದ್ದು, ಒಪ್ಪಿಗೆ ನೀಡಲಾಗಿದೆ ಎಂದು ಡಬ್ಲ್ಯುಎಫ್ಐನ ಅಧಿಕಾರಿ ಹೇಳಿದ್ದಾರೆ.