ವಿಜಯಸಾಕ್ಷಿ ಸುದ್ದಿ, ಗದಗ
ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದ್ದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. ಕಳೆದ ಸಾಲಿಗಿಂತಲೂ ಹೆಚ್ಚಿನ ಮತಗಳನ್ನು ಪಡೆದು ಜಯಭೇರಿ ಬಾರಿಸುವ ಮೂಲಕ ಅಶೋಕ ಮಂದಾಲಿ ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಿರೀಕ್ಷೆಯಂತೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಅವರು 1348 ಮತಗಳನ್ನು ಪಡೆದು ಅಧ್ಯಕ್ಷರಾಗಿ ಮರು ಆಯ್ಕೆಯಾದರು.
ಚುನಾವಣೆಗೆ ಸ್ಪರ್ಧಿಸಿದ್ದ ಮತ್ತೋರ್ವ ಅಭ್ಯರ್ಥಿ ಉದಯಗೌಡ ವೀರನಗೌಡ್ರ 409 ಮತ ಪಡೆದು ಉಪಾಧ್ಯಕ್ಷರಾಗಿ, ಪರಿಶಿಷ್ಟ ಜಾತಿ ಮೀಸಲಿನಲ್ಲಿ ವಿಜಯಕುಮಾರ ಚಲವಾದಿ 36 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸುವುದಕ್ಕಾಗಿಯೇ ರೂಪಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಿಗೆ ಜ.11 ರಂದು ಆನ್‌ಲೈನ್ ಮೂಲಕ ಮತದಾನ ನಡೆದಿತ್ತು. ಹೆಚ್ಚು ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿರುವ ಯುವಕರೇ ಈ ಬಾರಿ ಆಯ್ಕೆಗೊಂಡಿರುವುದು ವಿಶೇಷವಾಗಿದೆ.
ಪಕ್ಷದ ಹಿರಿಯರ ಮಾರ್ಗದರ್ಶನ, ಯುವ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ಹಿಂದಿನ ಅವಧಿಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದ ಯುವಕರೊಂದಿಗೆ ನಿರಂತರ ಸಂಪರ್ಕ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಮತ್ತೊಂದು ಬಾರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಇದು ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದೆ.
ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕ
ಯುವ ಕಾಂಗ್ರೆಸ್ ಅನ್ನುವುದು ಪಕ್ಷದ ದೊಡ್ಡ ಶಕ್ತಿಯಾಗಿದ್ದು, ಪಕ್ಷದಲ್ಲಿನ ಯುವಕರಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕಲ್ಪನೆಯ ಸಾಕಾರದೊಂದಿಗೆ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಶ್ರಮಿಸಿದವರನ್ನು ಆಯ್ಕೆ ಮಾಡುವ ಈ ಮಹತ್ವದ ಆನ್‌ಲೈನ್ ಮತದಾನದಲ್ಲಿ ಯುವಕ ಅಶೋಕ ಮಂದಾಲಿ ಎಲ್ಲಾ ಯುವ ಕಾಂಗ್ರೆಸ್ ಮನಸ್ಸುಗಳನ್ನು ಗೆದ್ದುಕೊಂಡು, ಆ ಮೂಲಕ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಹಾರ್ದಿಕ ಅಭಿನಂದನೆಗಳು.
ಡಿ ಆರ್. ಪಾಟೀಲ, ಕೆಪಿಸಿಸಿ ವಕ್ತಾರರು