ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಮರಾಠಾ ಪ್ರಾಧಿಕಾರದ ಹೆಸರಲ್ಲಿ ಕನ್ನಡಿಗರನ್ನು ನಿಂದಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದರು, ವಾಹನ ಸಂಚಾರ ಎಂದಿನಂತೆ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಲಾರಿ ಅಡ್ಡಗಟ್ಟಿ ಚಾಲಕರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಪೊಲೀಸರ ಮಧ್ಯೆ ವಾಕ್ಸಮರ ನಡೆಯಿತು. ರಾಜ್ಯ ಸರ್ಕಾರ, ಮಹಾರಾಷ್ಟ್ರ ಪರವಾಗಿ ಕೆಲಸ ಮಾಡಬೇಡಿ. ಕನ್ನಡಿಗರ ಪರ ಕೆಲಸ ಮಾಡಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಇದರಿಂದ ಚೆನ್ನಮ್ಮ ವೃತ್ತದಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡೆತಡೆಯುಂಟಾಯಿತು. ಲಾರಿ ಮೇಲೆ ಕಲ್ಲು ತೂರಲು ಯತ್ನಿಸಿದ ಕಾರ್ಯಕರ್ತರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸಿದರು.
ಅಲ್ಲದೇ, ಡಿಫೋದಿಂದ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಗದಗ-ಡೋಣಿ ಬಸ್ ಹಿಂದಿರುಗಿಸಿದರು. ಡಿಪೋದಿಂದ ಯಾವುದೇ ಬಸ್ ಬಿಡಬಾರದು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಈಗಾಗಲೇ ತೆಗೆದಿರುವ ಹೋಟೆಲ್ಗಳನ್ನು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಕರವೇ ಕಾರ್ಯಕರ್ತರು ಯತ್ನಿಸಿದರು. ಅಂಗಡಿ ಮುಚ್ಚುವಂತೆ ಮನವಿ ಮಾಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿಬೇಡಿ. ಅವರಿಗೆ ಆಸಕ್ತಿ ಇದ್ದರೆ ಮುಚ್ಚುತ್ತಾರೆ ಎಂದರು.
ಇದರಿಂದ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಮಾಡುತ್ತಿರುವ ಹೋರಾಟ ತೀವ್ರತೆ ಪಡೆದುಕೊಂಡಂತಾಗಿದೆ.