ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೋವಿಡ್-19 ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದಿಂದ ಜಾರಿ ಮಾಡಿದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಟಾನ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.
ಅವರು, ಜಿಲ್ಲಾ ಪಂಚಾಯತ್ ಸಭಾಂಗಣದ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಕೋವಿಡ್-19 2ನೇ ಅಲೆಯ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ನಿರ್ಬಂಧಗಳನ್ನು ಜೂನ್ 1 ರ ಬೆ 6 ವರೆಗೆ ವಿಧಿಸಲಾಗಿದೆ. ಸೋಂಕಿನ ಪ್ರಮಾಣ ನೋಡಿಕೊಂಡು ಇನ್ನೂ ಹೆಚ್ಚಿನ ನಿರ್ಬಂಧ ಅಗತ್ಯವಿದೆ ಎಂದು ಕಂಡು ಬಂದಲ್ಲಿ ಜೂನ್ 1 ರ ನಂತರ ಹೆಚ್ಚುವರಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದರು.
ಸದ್ಯ ಜಿಲ್ಲೆಯ ಎಲ್ಲ ಹೋಟೆಲ್ , ಚಹಾದ ಅಂಗಡಿ, ಬಾರ್, ರೆಸ್ಟೋರೆಂಟ್ ತೆರೆಯದಂತೆ ನಿರ್ಬಂಧಿಸಿದೆ. ಹೋಟೆಲ್ ಬಂದ ಆಗಿರುವುದರಿಂದ ನಿರ್ಗತಿಕರಿಗೆ ಹಾಗೂ ಬಡವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪಾರ್ಸಲ್ ಕೊಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಆಹಾರ ತಯಾರಿಕೆ ಹಾಗೂ ವಿತರಣೆಗೆ ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು ಮುಂದೆ ಬರುವವರ ಅಥವಾ ದಾನಿಗಳ ಮುಖಾಂತರವಾಗಿ ಆಹಾರ ವಿತರಿಸುವ ವ್ಯವಸ್ಥೆಯನ್ನು ಸ್ಥಳೀಯ ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದರು.
![](https://vijayasakshi.com/wp-content/uploads/2021/05/IMG-20210529-WA0133.jpg)
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಾರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಂಬುಲನ್ಸ್ ವ್ಯವಸ್ಥೆ ಅಲ್ಲದೇ ಸಣ್ಣ ಪುಟ್ಟ ರೋಗಿಗಳಿಗೆ , ವಿಕಲಚೇತನರಿಗೆ , ಸ್ಥಳೀಯ ಸಂಸ್ಥೆಗಳಿಂದ ಸಾರಿಗೆಗೆ ವ್ಯವಸ್ಥೆ ಕಲ್ಪಿಸಬೇಕು. ಆದರೆ ಸಾರಿಗೆ ಸೌಲಭ್ಯದ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪಿ.ಡಿ.ಓಗಳು ಹೆಚ್ಚು ಕಾರ್ಯಪ್ರವೃತ್ತರಾಗುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ನೋಡಿಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಗ್ರಾ.ಪಂ. ನಲ್ಲಿ ಟಾಸ್ಕ್ ಫೋರ್ಸ ಹೆಚ್ಚು ಕ್ರಿಯಾಶೀಲವಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನುಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳಿಗೆ ರೋಗಿಗಳು ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಕೋವಿಡ್ ಕೇರ್ ಸಂಟರ್ ಗೆ ರೋಗಿಗಳನ್ನು ಸ್ಥಳಾಂತರ ಮಾಡುವಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವವೂ ಮುಖ್ಯವಾಗಿದೆ ಎಂದರು.
![](https://vijayasakshi.com/wp-content/uploads/2021/05/IMG-20210529-WA0134.jpg)
ಕೋವಿಡ್ ಕೇರ್ ಸೆಂಟರ್ ಗಳು ಸ್ವಚ್ಛವಾಗಿರುವಂತೆ ಡಿ ಗ್ರುಪ್ ಕೆಲಸಗಾರರು ಕಾರ್ಯನಿರ್ವಹಿಸುವಂತೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯ ಸಂಚಾರ ಮಾಡದಂತೆ ಪಿ.ಡಿ.ಓಗಳು ಕ್ರಮ ವಹಿಸಬೇಕು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ವಿಕಲಚೇತನರಿಗೂ ಲಸಿಕೆ ಹಾಕುವ ಕುರಿತು ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ , ನಗರಸಭೆ ಪೌರಾಯುಕ್ತ ರಮೇಶ ಜಾಧವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.