ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾಥ ಹಿತರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಶ್ರೀ ಗವಿಸಿದ್ಧೇಶ್ವರ ಕ್ರೀಡಾ ಮತ್ತು ಕಲಾ ಸಾಂಸ್ಕೃತಿಕ ಸಂಸ್ಥೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಾಮೆಂಟ್ ಗವಿಶ್ರೀ ಟ್ರೋಫಿ-2021-22 ಆಯೋಜಿಸಲಾಗಿದ್ದು. ಜನೇವರಿ 5ರಂದು ಬೆಳಗ್ಗೆ 10-30ಕ್ಕೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಚಾಲನೆಗೊಳ್ಳಲಿದೆ ಎಂದು ಸಂಘಟಕ ಸೈಯದ್ ಮಹಿಮೂದ್ ಹುಸೇನಿ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ರನ್ನರ್ ಅಪ್ ತಂಡಕ್ಕೆ 50 ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ವಿಜೇತ ತಂಡಕ್ಕೆ 15 ಸಾವಿರ ನಗದು ಹಾಗೂ ಟ್ರೋಫಿ ಮತ್ತು ನಾಲ್ಕನೇ ವಿಜೇತ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಇದ ಜೊತೆಗೆ ಸರಣಿ ಪುರುಷೋತ್ತಮ, ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ, ಬೆಸ್ಟ್ ಬ್ಯಾಟ್ಸ ಮನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಫೀಲ್ಡರ್ ಘೋಷಣೆ ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಟೂರ್ನಮೆಂಟ್ ನ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ಸಮಾಜದ ಹಲವು ಗಣ್ಯರು ಕೊಡುಗೆಯಾಗಿ ನೀಡಿದ್ದಾರೆ. ಮುಂಬಯಿನಿಂದಲೂ ತಂಡವೊಂದು ನೋಂದಣಿಯಾಗಿದೆ. ಒಟ್ಟಾರೆ ಇದುವರೆಗೂ 36 ತಂಡಗಳು ನೋಂದಣಿ ಮಾಡಿಕೊಂಡಿವೆ. ನೋಂದಣಿ ಮಾಡುವ ಪ್ರತಿ ತಂಡಕ್ಕೂ 5 ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
ಜನೇವರಿ 5ರಂದು ಬೆಳಗ್ಗೆ 10-30ಕ್ಕೆ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೊಪ್ಪಳದ ಶ್ರೀ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಅಮೃತ್ ಅಧ್ಯಕ್ಷತೆ ವಹಿಸುವರು. ಸಂಸದ ಕರಡಿ ಸಂಗಣ್ಣ ಸಮಾರಂಭ ಉದ್ಘಾಟಿಸುವರು. ಶಾಸಕ ರಾಘವೇಂದ್ರ ಹಿಟ್ನಾಳ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ್, ಎಸ್ಪಿ ಟಿ.ಶ್ರೀಧರ್, ಡಿವೈಎಸ್್ಪಿ ವೆಂಕಟಪ್ಪ ನಾಯಕ್, ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ್ ಭೂಮರಡ್ಡಿ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರವಣಕುಮಾರ್ ಈರಣ್ಣ, ಖಲೀಲ್ ಮಾನ್ವಿ ಇದ್ದರು.
ಜ.5ರಿಂದ ಗವಿಶ್ರೀ ಟ್ರೋಫಿ ಕ್ರಿಕೆಟ್ ಟೂರ್ನಿ; ವಿಜೇತ ತಂಡಕ್ಕೆ ಲಕ್ಷ ರೂ. ಮತ್ತು ಆಕರ್ಷಕ ಟ್ರೋಫಿ
Advertisement