ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಒಂಗೊಳೆ (ಆಂಧ್ರ): ಪೊಲೀಸ್ ಠಾಣೆಯ ಎದುರೇ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ರಕಾಶಂ ಜಿಲ್ಲೆಯ ಒಂಗೊಳೆ ಪಟ್ಟಣದಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ.
ಕ್ರಿಮಿನಲ್ ಹಿನ್ನೆಲೆಯ ಈ ವ್ಯಕ್ತಿ ಬುಧವಾರ ತಾಲೂಕು ಠಾಣೆಗೆ ಬಂದವನೇ, ಅಲ್ಲಿರುವ ಗಾಜುಗಳನ್ನು ಒಡೆದು ಗಾಯ ಮಾಡಿಕೊಂಡ. ಆತನನ್ನು ಆಸ್ಪತ್ರೆಗೆ ಸೇರಿಸಲು ಕರೆಸಿದ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿ ತಿಕ್ಕಲುತನ ಮೆರೆದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅಂಬ್ಯುಲೆನ್ಸ್ ಏರಿದ ನಂತರ ಅಲ್ಲಿದ್ದ ಹತ್ತಿಗೆ ಬೆಂಕಿ ಹಾಕಿದ. ಧಗ್ಗನೆ ಅಂಬ್ಯುಲೆನ್ಸ್ ಹೊತ್ತಿ ಉರಿಯತೊಡಗಿತು. ‘ನಾನು ಇಲ್ಲೇ ಸಂತೋಷದಿಂದ ಸಾಯುವೆ, ಕೆಳಗೆ ಬರಲ್ಲ’ ಎಂದು ಕಿರುಚತೊಡಗಿದ. ಪೊಲೀಸರು ಹರಸಾಹಸ ಮಾಡಿ ಹೊರಗೆ ಎಳೆ ತಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜೈಲಿಗೆ ಅಟ್ಟಲಾಗಿದೆ.
ಅಂಬ್ಯುಲೆನ್ಸ್ ಚಾಲಕ ಮತ್ತು ಆರೋಗ್ಯ ಸಿಬ್ಬಂದಿಯೋರ್ವ ತಕ್ಷಣಕ್ಕೆ ಜಿಗಿದು ಅಪಾಯದಿಂದ ಪಾರಾದರು.