ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೇಳುವ ಮಾಜಿ ಸಚಿವ ಶಿವರಾಜ ತಂಗಡಗಿ ಈ ಹಿಂದೆ ಬಿಜೆಪಿಯಲ್ಲಿದ್ದರು. ಅಧಿಕಾರ ಅನುಭವಿಸಿದಾಗ ಅವರೇ ಸುಳ್ಳು ಹೇಳುವುದನ್ನು ಕಲಿಸಿಕೊಟ್ಟು ಹೋಗಿದ್ದೇನೆ ಎಂಬ ಭ್ರಮೆಯಲ್ಲಿರಬೇಕು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಶಿವರಾಜ ತಂಗಡಗಿ ಯಾವುದರ ಬಗ್ಗೆ ಮಾತನಾಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಅವರೊಬ್ಬ ಮಾಜಿ ಸಚಿವರಾಗಿ ಸ್ಪಷ್ಟತೆ ಪಡೆದುಕೊಂಡು ಮಾತನಾಡಬೇಕು ಎಂದರು.
ಇನ್ನು ನಾಯಕತ್ವ ಬದಲಾವಣೆ ಇಲ್ಲ ಎಂದು ಈಗಾಗಲೇ ನಮ್ಮ ಪಕ್ಷದ ರಾಜ್ಯದ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ. ಆದರೆ ನಮ್ಮ ಪಕ್ಷದಲ್ಲಿ ಆಗುವ ಬದಲಾವಣೆಗಳು ಸಿದ್ದರಾಮಯ್ಯ ಅವರಿಗೆ ಹೇಗೆ ಗೊತ್ತಾಗುತ್ತವೆ. ಎಲ್ಲರಿಗೂ ಎಲ್ಲ ಕಡೆ ಸ್ನೇಹಿತರು ಇರುತ್ತಾರೆ. ಸಿದ್ದರಾಮಯ್ಯ ಅವರೇನು ಜ್ಯೋತಿಷ್ಯ ಹೇಳುತ್ತಾರಾ ಎಂದರು.
ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತು ನಮ್ಮ ರಾಜ್ಯ, ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ. ಆದರೆ ಈಗಾಗಲೇ ಬ್ರೇಕ್ ಹಾಕಲಾಗಿದೆ. ಹಾಗೆಲ್ಲಾ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎಂದರು.
ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಪ್ಪಳ ಜಿಲ್ಲೆಗೆ ಆದ್ಯತೆ ನೀಡಿ ಎಂದು ನಾವು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರಿಗೆ, ಸಿಎಂ ಅವರಿಗೆ ಒತ್ತಾಯ ಮಾಡಿದ್ದೇವೆ. ಜಿಲ್ಲೆಯಲ್ಲಿರುವ ಮೂವರು ಶಾಸಕರಲ್ಲಿ ಯಾರೊಬ್ಬರಿಗಾದರೂ ಸಚಿವ ಸ್ಥಾನ ನೀಡಲಿ. ನಮ್ಮ ಜಿಲ್ಲೆಗೆ ಆದ್ಯತೆ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ದೊಡ್ಡನಗೌಡ ಪಾಟೀಲ್ ಹೇಳಿದರು.