ಕಾರಟಗಿ ಮರ್ಡರ್ ಕೇಸ್‌ನಲ್ಲಿ ಅಮಾನವೀಯ ವರ್ತನೆ; ಪಿಎಸ್ಐ ವಿರುದ್ದ ಮಾನವ ಹಕ್ಕು ಆಯೋಗಕ್ಕೆ ದೂರು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಲೆ ಕಾರಟಗಿ ಮರ್ಡರ್ ಕೇಸ್ ಆರೋಪಿಗಳ ಪತ್ತೆ ಮಾಡುವ ಭರದಲ್ಲಿ ಅಮಾಯಕರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐಯಿಂದ ಥಳಿಸಿಕೊಂಡಿರೋ ಧಾರವಾಡ ಜಿಲ್ಲೆ ಮದಾರಮಡ್ಡಿ ಮೂಲದ ಇಬ್ಬರು ಗ್ಲಾಸ್ ಸ್ಟೀಮ್ ಜೋಡಿಸುವ ಕಾರ್ಮಿಕರು ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ಅ.17 ರಂದು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ಮಹಿಳೆ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳ ಪತ್ತೆಗೆ ಹೊರಟ ಕಾರಟಗಿ ಪಿಎಸ್ಐ ಅವರೇ ದಾರಿ ತಪ್ಪಿದ್ದಾರೆ. ಗಂಗಾವತಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದ ಇಬ್ಬರು ಕಾರ್ಮಿಕರನ್ನು ಕೊಲೆ ಆರೋಪಿಗಳು ಎಂದು ಶಂಕಿಸಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಕಾರಟಗಿ ಪೊಲೀಸ್ ಠಾಣೆಗೆ ಕರೆ ತಂದು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಹಿಗ್ಗಾ- ಮುಗ್ಗ ಥಳಿಸಿದ್ದಾರೆ ಎಂದು ದೂರಲಾಗಿದೆ.
ಅಷ್ಟೊತ್ತಿಗೆ ಕನಕಗಿರಿ ಪಿಎಸ್ಐ ಪ್ರಶಾಂತ ನೇತೃತ್ವದ ಮತ್ತೊಂದು ತಂಡ, ನಿಜವಾದ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆ ಮಾಡಿದೆ. ವಾಸ್ತವ ತಿಳಿದು, ಅಮಾಯಕರ ಕ್ಷಮೆ ಕೇಳಬೇಕಿದ್ದ ಪಿಎಸ್ಐ ಅವಿನಾಶ ಕಾಂಬ್ಲೆ ಓವರ್ ಸ್ಮಾರ್ಟ್ ಪೊಲೀಸಿಂಗ್ ಮಾಡಿದ್ದಾರೆ. ಅಮಾಯಕರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 96(ಸಿ) ಅಡಿ ಪ್ರಕರಣ ದಾಖಲಿಸಿಕೊಂಡು, ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 23ರಂದು ಗಂಗಾವತಿ ಕೋರ್ಟ್‌ಗೆ ಹಾಜರಾಗಿ ದಂಡ ಪಾವತಿಸುವಂತೆ ಸೂಚಿಸಿದ್ದಾರಂತೆ.
ಸಿಡಿಆರ್ ಯಡವಟ್ಟು?: ಅ.17ರ ಸಂಜೆ 7.30ರ ಸುಮಾರಿಗೆ ಕಾರಟಗಿ ಪಟ್ಟಣ ಕ್ರೌರ್ಯದ ಘಟನೆಯೊಂದಕ್ಕೆ ಸಾಕ್ಷಿ ಆಗಿತ್ತು. ಕಾರಟಗಿಯ ಬಸವೇಶ್ವರ ನಗರದಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ ನವ ದಂಪತಿ ಮೇಲೆ ಅಪರಿಚಿತರು ರಾಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತಿ ಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು, ಎರಡು ತಂಡ ರಚಿಸಿ ತನಿಖೆಗೆ ಸೂಚಿಸಿದ್ದಾರೆ.
ಕನಕಗಿರಿ ಪೊಲೀಸ್ ಪಿಎಸ್ಐ ಪ್ರಶಾಂತ ಅವರ ತಂಡ ಮುಧೋಳ ಕಡೆ ಮುಖ ಮಾಡಿದೆ. ಕಾರಟಗಿ ಪಿಎಸ್ಐ ಅವಿನಾಶ ಅವರ ತಂಡ, ಗಂಗಾವತಿ ಕಡೆ ಮುಖ ಮಾಡಿದೆ. ತನಿಖೆಗೆ ತಾಂತ್ರಿಕ ಸಹಾಯ ಪಡೆದುಕೊಂಡ ಕಾರಟಗಿ ಪಿಎಸ್ಐ ಯಡವಟ್ಟು ಮಾಡಿಕೊಂಡಿದ್ದಾರೆ. ಬೇರೆ ಜಿಲ್ಲೆಯಿಂದ ಕಾರಟಗಿ ಸುತ್ತಮುತ್ತ ಓಡಾಡಿರುವ ಮತ್ತು ಕೆಲ ದಿನ ಕಾರಟಗಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿರುವ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡುವ ನೆಪದಲ್ಲಿ ಧಾರವಾಡ ಮೂಲದ ಅಮಾಯಕ ಕಾರ್ಮಿಕರ ಮೇಲೆ ಕೈ ಮಾಡಿದ್ದಾರೆ.
ಧಾರವಾಡ ಜಿಲ್ಲೆ ಮದಾರಮಡ್ಡಿ ಗ್ರಾಮದ ಸುಹೇಬ ಕರಡಿಗುಡ್ಡ ಮತ್ತು ಮೋಹಮ್ಮದ ಜಮೀಲ ಎಂಬ ಇಬ್ಬರು ಕಾರ್ಮಿಕರು ದಿನಾಂಕ: 14-10-2020 ರಂದು ಕಾರಟಗಿ ಪಟ್ಟಣಕ್ಕೆ ಆಗಮಿಸಿ, ಲಕ್ಷ್ಮೀ ವೆಂಕಟೇಶ್ವರ ಟೂರಿಸ್ಟ್ ಹೋಮ್‌ನಲ್ಲಿ ತಂಗಿದ್ದಾರೆ. ಕೊಲೆ ನಡೆದ ಅ.17ರ ಸಂಜೆ 6ಕ್ಕೆ ಲಾಡ್ಜ್ ಖಾಲಿ ಮಾಡಿ, ಕಾರಟಗಿ ಸಮೀಪದ ಸಮೀಪದ ಸಾಲುಂಚಿಮರ ಗ್ರಾಮಕ್ಕೆ ಆಗಮಿಸಿ ಹೊಸ ಮನೆಯ ಬಾತ್ ರೂಮ್‌ನಲ್ಲಿ ಗ್ಲಾಸ್ ಸ್ಟೀಮ್ ಅಳವಡಿಸಿ ಗಂಗಾವತಿಗೆ ಹೋಗಿದ್ದಾರೆ.
ಗಂಗಾವತಿಯಲ್ಲಿಯೂ ಒಬ್ಬರ ಮನೆಯಲ್ಲಿ ಕೆಲಸ ಇದ್ದರಿಂದ ಗಂಗಾವತಿಯ ಲಾಡ್ಜ್‌ವೊಂದರಲ್ಲಿ ತಂಗಿದ್ದಾರೆ. ವಾಸ್ತವದಲ್ಲಿ ದಂಪತಿ ಕೊಲೆ ಮಾಡಿದ ಆರೋಪಿಗಳ ‘ಮೋಡ್ ಆಫ್ ಆಪರೇಷನ್ ‘ ಪೊಲೀಸರು ಗೆಸ್ ಮಾಡಿದಂತೆಯೇ ಈ ಇಬ್ಬರು ಕಾರ್ಮಿಕರ ಪ್ರವಾಸ ಚಟುವಟಿಕೆ ಇದೆ. ಮಧ್ಯರಾತ್ರಿ 1ಕ್ಕೆ ಗಂಗಾವತಿ ಲಾಡ್ಜ್‌ಗೆ ನುಗ್ಗಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿ ಪೂರ್ತಿ ಟ್ರೀಟ್‌ಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐ ಮಾಡಿದ ಯಡವಟ್ಟಿನ ಬಗ್ಗೆ ನೊಂದವರು ಕೊಪ್ಪಳ ಎಸ್ಪಿ ಅವರಿಗೂ ದೂರು ನೀಡಿದ್ದಾರೆ.