ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ:
ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಜೀಗೇರಿ ಕೆರೆ ತುಂಬಿದೆ. ಆದರೆ ಕೆರೆಯಿಂದ ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಹೀಗಾಗಿ ಬ್ರಿಡ್ಜ್ ಇಲ್ಲದ ಪರಿಣಾಮ ಸಂಚರಿಸಲು ಗ್ರಾಮಸ್ಥರು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲಿದ್ದರಿಂದ ಮಳೆ ಆಧಾರಿತ ಕೃಷಿಯನ್ನು ರೈತ ಸಮೂಹ ನೆಚ್ಚಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಉತ್ತಮ ಮಳೆಯಾದಾಗ ಕೆಲ ಗ್ರಾಮಗಳಲ್ಲಿರುವ ಕೆರೆಗಳು ಭರ್ತಿಯಾದರೆ ಇನ್ನೂ ಕೆಲವು ಕೆರೆಗಳಿಗೆ ನೀರು ಹರಿಯುವುದಿಲ್ಲ. ಹೀಗಾಗಿ ಭರ್ತಿಯಾದ ಕೆರೆಯಲ್ಲಿನ ನೀರು ಸಂಗ್ರಹಿಸಿಕೊಳ್ಳಲು ಕೆರೆ ಅಭಿವೃದ್ಧಿಗೆ ಆಡಳಿತ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಪಟ್ಟಣ ಸೇರಿ ತಾಲೂಕಿನಲ್ಲಿ ಕಳೆದ ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಾಗೇಂದ್ರಗಡ ಕೆರೆ, ವದೇಗೋಳ ಕೆರೆ, ಜೀಗೇರಿ ಹಾಗೂ ಗಜೇಂದ್ರಗಡ ಕೆರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರೆ, ಜಮೀನಿನಲ್ಲಿನ ಕೃಷಿ ಹೊಂಡಗಳು ತುಂಬಿವೆ. ಆದರೆ ಜೀಗೇರಿ ಕೆರೆಯಲ್ಲಿ ತುಂಬಿರುವ ನೀರು ಅಪಾರ ಪ್ರಮಾಣದಲ್ಲಿ ಕೊಡಿ ಮೂಲಕ ಹರಿದು ಹೋಗುತ್ತಿರುವ ಪರಿಣಾಮ ಗ್ರಾಮಸ್ಥರು ಈ ಮಾರ್ಗವಾಗಿ ಸಂಚರಿಸಲು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆರೆಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಪೋಲಾಗುತ್ತಿರುವ ನೀರಿಗೆ ಬ್ರೀಡ್ಜ್ ಕಟ್ಟಲು ಹಲವು ವರ್ಷಗಳಿಂದ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಹಾಗೂ ಆಡಳಿತದ ಗಾಢನಿದ್ರೆಯಿಂದಾಗಿ ಈವರೆಗೂ ಗ್ರಾಮಸ್ಥರ ಕೂಗಿಗೆ ನ್ಯಾಯ ಸಿಕ್ಕಿಲ್ಲ. ಅಲ್ಲದೆ ಬ್ರಿಡ್ಜ್ ನಿರ್ಮಾಣ ಕುರಿತು ಪಿಡಬ್ಲೂಡಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅಧಿಕಾರಿಗಳು ಸಂರ್ಪಕಕ್ಕೆ ಸಿಗಲಿಲ್ಲ. ಹೀಗಾಗಿ ಹಲವಾರು ವರ್ಷಗಳಿಂದ ರೈತರ ಹಾಗೂ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ತಾಲೂಕಿನ ೭ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆಧಾರದ ಮೇಲೆ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.
ಗಣಪತಿಸಿಂಗ್ ಶಿಗ್ಗಾಂವಿ
ಅಭಿಯಂತರ, ಜಿಲ್ಲಾ ಸಣ್ಣ ನಿರಾವರಿ ಇಲಾಖೆ
ಗ್ರಾಮದ ಜೀಗೇರಿ ಕೆರೆಯ ಅಭಿವೃದ್ಧಿ ಹಾಗೂ ಬ್ರಿಡ್ಜ್ ನಿರ್ಮಾಣಕ್ಕೆ ಈ ಹಿಂದಿನಿಂದಲೂ ಆಗ್ರಹಿಸಲಾಗುತ್ತಿದೆ. ಆದರೆ ಈವರೆಗೂ ಕೆರೆ ಅಭಿವೃದ್ಧಿ ಹಾಗೂ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ.
ಜೀಗೇರಿ ಗ್ರಾಮಸ್ಥರು.