ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅವುಗಳು ಯಶಸ್ವಿಯಾಗಲು ಯೋಜನೆ ಎಷ್ಟು ಜನರಿಗೆ ತಲುಪುತ್ತಿದೆ? ಜನರು ಎಷ್ಟರಮಟ್ಟಿಗೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ? ಎಂಬುವುದೂ ಬಹುಮುಖ್ಯ. ಅದರಲ್ಲಿ ಬಡವರ ಹಸಿವು ನೀಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಪ್ರಮುಖವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ. ಇದರಿಂದ ಲಕ್ಷಾಂತರ ಬಡ ಜನರ ಹೊಟ್ಟೆ ತುಂಬುತ್ತಿದೆ. ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದ ಜನರು ಹೊಟ್ಟೆ ತುಂಬಾ ಊಟ ಮಾಡುವಂತಾಗಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆದ ಅಕ್ಕಿಯನ್ನು ಪಡಿತರದಾರರು ಸಮೀಪದ ನಗರಗಳಿಗೆ ತೆರಳಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಗರ ಪ್ರದೇಶಗಳಲ್ಲಿ ಅಕ್ಕಿ ಖರೀದಿಸುವ ದಲ್ಲಾಳಿಗಳ ಸಂಖ್ಯೆ ಹೆಚ್ಚುತ್ತಿದೆ.
ಅನ್ನಭಾಗ್ಯ ಯೋಜನೆ ಫ್ಲಾಪ್?
ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ಸದುದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2013ರ ಜುಲೈನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿತು. ಈ ದಿಶೆಯಲ್ಲಿ ಸರ್ಕಾರ ದಿಟ್ಟ ಹೆಜ್ಜೆಯನ್ನಿಡುತ್ತಿದೆ. ಆದರೆ, ಸರ್ಕಾರದ ಹೆಜ್ಜೆಯ ಗುರುತು ಅಳಿಸಿ ಹಾಕುವತ್ತ ದಲ್ಲಾಳಿಗಳು, ಪಡಿತರದಾರರು ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಇದರಿಂದಾಗಿ ಸರ್ಕಾರದ ಜನಪರ ಯೋಜನೆಗಳು ಹಳ್ಳ ಹಿಡಿಯುತ್ತಿವೆ.
ಜಿಲ್ಲೆಯಲ್ಲಿ ರೇಶನ್ ಅಕ್ಕಿ ಮಾರಾಟದ ಹಾವಳಿ ಜೋರಾಗಿದ್ದು, ಸರ್ಕಾರದ ಬಹುದೊಡ್ಡ ಯೋಜನೆಯ ಆಶಯ ನೆಲಕಚ್ಚಿದಂತಾಗುತ್ತಿದೆ.
ಹೊರ ರಾಜ್ಯಕ್ಕೆ ಅಕ್ಕಿ ಸಾಗಾಟ
ಪಡಿತರದಾರರಿಂದ ಕೇವಲ 12 ರೂ.ಗೆ ಅನ್ನಭಾಗ್ಯ ಅಕ್ಕಿ ಖರೀದಿಸುವ ದಲ್ಲಾಳಿಗಳು ಖರೀದಿಸಿದ ಅಕ್ಕಿಯನ್ನು ಪಾಲಿಶ್ ಮಾಡಿಸಿ ಗುಜರಾತ್, ಗೋವಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಸಾಗಿಸುತ್ತಾರೆ. ಪಾಲಿಶ್ ಮಾಡಿದ ಅದೇ ಅಕ್ಕಿಯನ್ನು ಗ್ರಾಹಕರಿಗೆ 42 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಅಕ್ಕಿ ಸಾಗಾಟದಿಂದ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಧೋಗತಿಯತ್ತ ಸಾಗುತ್ತಿದೆ.
ಗದಗ ಅಕ್ರಮ ಅಕ್ಕಿ ಖರೀದಿ ಕೇಂದ್ರ?
ಅಕ್ಕಿ ಖರೀದಿ ಮತ್ತು ಅಕ್ರಮ ಸಾಗಾಟದ ವಹಿವಾಟು ಗದಗ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಳಗುಂದ ಸಹಿತ ಜಿಲ್ಲೆಯ ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ಸದ್ದು ಮಾಡುತ್ತಿದೆ. ಯಾರೊಬ್ಬರ ಭಯವಿಲ್ಲದೆ ಅಕ್ರಮ ಅಕ್ಕಿ ವ್ಯವಹಾರ ನಡೆಸುತ್ತಿದ್ದಾರೆ. ನಗರ ಪ್ರದೇಶಗಳ ಸುತ್ತಲಿನ ಗ್ರಾಮಗಳಿಂದ ಅಕ್ಕಿ ತರುವ ಪಡಿತರದಾರರು ಅತೀ ಕಡಿಮೆ ದರದಲ್ಲಿ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯು ಅಕ್ಕಿ ಮಾರಾಟ ಕೇಂದ್ರವಾದಂತಾಗಿದೆ.
ಇತ್ತೀಚೆಗಷ್ಟೇ ಗಜೇಂದ್ರಗಡದ ಸುಖಸಾಗರ ಬಳಿ ಅನ್ನಭಾಗ್ಯ ಯೋಜನೆಯ ಅಕ್ರಮ ಅಕ್ಕಿ ಚೀಲಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ವಶಪಡಿಸಿಕೊಳ್ಳಲಾಗಿತ್ತು. ಅಷ್ಟಾದರೂ, ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮತ್ತು ಸಾಗಣೆ ನಿಲ್ಲುತ್ತಿಲ್ಲ. ಇದರಿಂದ ಅಧಿಕಾರಿಗಳು ಅಕ್ಕಿ ದಂಧೆಕೋರರ ಜೊತೆ ಪಾಲುದಾರರಾಗಿದ್ದಾರೆಯೇ? ಎಂಬ ಗುಮಾನಿಯೂ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.
ಮುಳಗುಂದ ಪಟ್ಟಣದ ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿಯೇ ಅಡುಗೆ ಎಣ್ಣೆ ವ್ಯಾಪಾರಸ್ಥರು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ರಾಜಾರೋಷವಾಗಿ ಖರೀದಿಸುತ್ತಿದ್ದಾರೆ. ಖರೀದಿಸಿದ ಅಕ್ಕಿಯನ್ನು ನಗರದ ಶ್ರೀಕೃಷ್ಣ ದೇವಸ್ಥಾನದ ಹತ್ತಿರ ಸಂಗ್ರಹಿಸಿಟ್ಟು, ನಸುಕಿನ ಜಾವದಲ್ಲಿ ಗಾಡಿಯ ಮೂಲಕ ಬೇರೆಡೆ ಸಾಗಿಸುತ್ತಾರೆ ಎನ್ನಲಾಗಿದೆ.
ಜನಪ್ರತಿನಿಧಿಯೊಬ್ಬರ ಆಪ್ತನ ದಂಧೆ?
ಗಜೇಂದ್ರಗಡಲ್ಲಿ ಸಿಕ್ಕಿರುವ ಅನ್ನಭಾಗ್ಯ ಅಕ್ಕಿ ಚೀಲಗಳು ಎಲ್ಲಿಯವು? ಅಕ್ಕಿ ಎಲ್ಲಿಂದ ಎಲ್ಲಿಗೆ ಸಾಗಾಟವಾಗುತ್ತಿತ್ತು? ಗಜೇಂದ್ರಗಡದಲ್ಲಿ ನಡೆಯುವ ದಂದೆಯ ಹಿಂದೆ ಯಾರಿದ್ದಾರೆ? ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತ ಈ ದಂಧೆಯಲ್ಲಿ ತೊಡಗಿದ್ದಾರಾ? ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರಾ? ಎಂಬ ಪ್ರಶ್ನೆಗಳಿಗೆ ಪೊಲೀಸರ ನಿಷ್ಪಕ್ಷಪಾತ ತನಿಖೆ ನಡೆಸಿದಾಗಲೇ ಉತ್ತರ ಸಿಗಲಿದೆ.