ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮಂಡ್ಯ: ದೇವಸ್ಥಾನವೊಂದರ ಕಾಣಿಕೆ ಹುಂಡಿ ಮತ್ತು ದೇವಸ್ಥಾನದ ಇತರ ಅಮೂಲ್ಯ ವಸ್ತುಗಳನ್ನು ಕದಿಯಲು ಬಂದ ಗುಂಪೊಂದು ದೇವಸ್ಥಾನದಲ್ಲಿ ಮಲಗಿದ್ದ ಮೂವರು ಕಾವಲುಗಾರರನ್ನು ಕೊಂದಿದೆ ಎನ್ನಲಾದ ಪ್ರಕರಣ ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯದ ಗುತ್ತಲಿನ ಅರ್ಕೇಶ್ವರ ದೇವಾಲಯದಲ್ಲಿ ಮಲಗಿದ್ದ ಮೂವರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕಾಶ(34), ಆನಂದ(33) ಹಾಗೂ ಗಣಪತಿ (35) ಕೊಲೆಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಈ ಮೂವರು ದೇವಾಲಯದ ಕಾವಲುಗಾರಾಗಿ ಕೆಲಸ ಮಾಡುತ್ತಿದ್ದರು. ಈ ತ್ರಿವಳಿ ಕೊಲೆ ಸೇರಿದಂತೆ ಕಳೆದ ಒಂದು ವಾರದಲ್ಲಿ ಮಂಡ್ಯದಲ್ಲಿ ಒಟ್ಟು ಐದು ಜನರ ಕೊಲೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ದೇವಸ್ಥಾನದ ಹುಂಡಿಯನ್ನು ಅನತಿ ದೂರದಲ್ಲಿ ಬಿಸಾಡಲಾಗಿದೆ. ಹೀಗಾಗಿ ಹುಂಡಿ ಕಳ್ಳತನಕ್ಕೆ ಮೂವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೇವಾಲಯದಲ್ಲಿ ಕಳ್ಳತನ ನಡೆಸುವ ತಂಡದಿಂದ ವ್ಯವಸ್ಥಿತವಾಗಿ ದುಷ್ಕೃತ್ಯ ನಡೆದಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಡಿವೈಎಸ್ಪಿ ನವೀನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.