27.8 C
Gadag
Friday, September 22, 2023

ದೇಶವನ್ನೇ ಮಾರಾಟ ಮಾಡಲು ಹೊರಟಿದೆ ಬಿಜೆಪಿ; ಶಾಸಕ ಅಮರೇಗೌಡ ಬಯ್ಯಾಪುರ ಆರೋಪ

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಇಷ್ಟು ವರ್ಷ ಅಧಿಕಾರ ನಡೆಸಿದ ಬಿಜೆಪಿ ಸಾಧಿಸಿದ್ದೇನೆಂದರೆ ಬಿಎಸ್‌ಎನ್‌ಎಲ್, ರೈಲ್ವೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು. ಹೀಗೇ ಬಿಟ್ಟರೆ ವಿಮಾನ ವ್ಯವಸ್ಥೆಯನ್ನು ಮಾರಾಟ ಮಾಡುತ್ತಾರೆ, ಮುಂದೆ ದೇಶವನ್ನೇ ಮಾರಾಟ ಮಾಡುತ್ತಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಬಡವರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ಶಾಸಕರ ಆಸ್ತಿ ಕನಿಷ್ಠ ಸಾವಿರಾರು ಕೋಟಿ ಇರುತ್ತೆ. ಸಚಿವ ಸ್ಥಾನ ನೀಡಬೇಕಾದರೆ ಪಕ್ಷಕ್ಕೆ ದುಡಿದ ಬಗೆ, ಜನಪರ ಕೆಲಸ ಮಾಡಿದ ರೀತಿ, ಜಾತಿ ನೋಡಿ ಸಚಿವ ಸ್ಥಾನ ನೀಡುವ ಪರಿಪಾಠ ಕಾಂಗ್ರೆಸ್‌‌ನಲ್ಲಿದ್ದರೆ, ಬಿಜೆಪಿಯಲ್ಲಿ ಯಾವ ಶಾಸಕ ಎಷ್ಟು ಕೋಟಿ ಹಣ ಪಕ್ಷಕ್ಕೆ ಕೊಡುತ್ತಾರೆ ಎಂಬುದರ ಮೇಲೆ ಮಂತ್ರಿ ಸ್ಥಾನ ನಿರ್ಧಾರ ಆಗುತ್ತೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮುಖ್ಯಮಂತ್ರಿಗಳು ಶೇಕಡಾ 60 ರಷ್ಟು ಸ್ಥಾನಗಳು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದರೆ, ಬಿಜೆಪಿ ರಾಜ್ಯಾಧ್ಯಕ್ಷರು ಶೇಕಡಾ 55 ರಷ್ಟು ಎಂದು ತಿಳಿಸಿದರು. ಮಂತ್ರಿಗಳು ಶೇಕಡಾ 50 ರಷ್ಟು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದು ಹೇಳಿರುವುದನ್ನ ನೋಡಿದರೆ ಬಿಜೆಪಿ ನಾಯಕರೆಲ್ಲ ಹೇಳುವುದು ಸುಳ್ಳು ಎಂಬುದು ಸ್ಪಷ್ಟ. ರಾಜ್ಯಾದ್ಯಂತ ಕಾಂಗ್ರೆಸ್ ಬೆಂಬಲಿತರೇ ಹೆಚ್ಚು ಗೆದ್ದಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆ ಹುಟ್ಟಿಕೊಂಡದ್ದೇ ಕಾಂಗ್ರೆಸ್ ಕಾಲಾವಧಿಯಲ್ಲಿ. ಬಿಜೆಪಿ ರಾಜ್ಯವನ್ನು, ದೇಶವನ್ನು ಅಧಃಪತನದ ಹಾದಿಯತ್ತ ಒಯ್ಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ, ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ದೂರಿದರು.
ಕೋವಿಡ್-19 ಹೆಸರಿನಲ್ಲಿ ಬಿಜೆಪಿ ಸರಕಾರ ಲೂಟಿ ಹೊಡೆಯುವ ಕೆಲಸಕ್ಕೆ ಇಳಿದಿದೆಯೇ ಹೊರತು ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಯಡಿಯೂರಪ್ಪ ಸಿಎಂ ಆದನಂತರ ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಹೊರತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಡಿಗಾಸು ನೀಡಿಲ್ಲ ಎಂದು ಅವರು ಹರಿ ಹಾಯ್ದರು.
ದೊಡ್ಡ ದೊಡ್ಡ ಶ್ರೀಮಂತರಿಗೆ ಮಕ್ಕಳು, ಮೊಮ್ಮಕ್ಕಳು ಹುಟ್ಟಿದರೆ ಅಲ್ಲಿ ಭೇಟಿ ಕೊಡುವ ಪ್ರಧಾನಿ ಮೋದಿಯವರು, ರೈತರು ಸಂಕಷ್ಟ ಅನುಭವಿಸುತ್ತಲೇ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದು, ಅಲ್ಲಿಗೆ ಭೇಟಿ ಕೊಡಲು, ಅವರ ಸಮಸ್ಯೆ ಆಲಿಸಲು ಪ್ರಧಾನಿ ಬಳಿ ಸಮಯ ಇಲ್ಲ. ಬದಲಾಗಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಬಿಜೆಪಿ ಸರಕಾರ ಎಂದು ಗುಡುಗಿದರು.
ಪಕ್ಷದ ಮುಖಂಡರಾದ ಜನಾರ್ದನ ಹುಲಗಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಾಲಚಂದರ್, ಕಾಟನ್ ಪಾಷಾ, ಅಕ್ಬರ್ ಪಾಷಾ ಪಲ್ಟಾನ್, ಸುರೇಶ್ ಭೂಮರಡ್ಡಿ, ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಇಂದಿರಾ ಭಾವಿಕಟ್ಟಿ, ಕಿಶೋರಿ, ಮಾಲತಿ ನಾಯಕ್, ರವಿ ಕುರಗೋಡ್ ಇತರರು ಇದ್ದರು. ಕೃಷ್ಣ ಇಟ್ಟಂಗಿ ಕಾರ್ಯಕ್ರಮ ನಿರ್ವಹಿಸಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!