-ಪುಣ್ಯಾತ್ಮ, ದೊಡ್ಡಮನುಷ್ಯ ತಂಗಡಗಿ ಸಾರಥಿ ಪಾತ್ರ ಬಿಟ್ಟು ಬೇರೆ ಪಾತ್ರದಲ್ಲಿ ಮುಂದೆ ಬಾ.. ನಾವ್ಯಾರು ಅಂತ ತೋರಸ್ತಿವಿ
-2023ರ ಚುನಾವಣೆಯಲ್ಲೂ ಬಿಜೆಪಿನೇ ಗೆಲ್ಲೋದು, ಬೇಕಾದರೆ ರಕ್ತದಲ್ಲಿ ಬರೆದುಕೊಡ್ತಿನಿ
-ಸಿಎಂ ಯಡಿಯೂರಪ್ಪಗೆ ವಿಜಯೇಂದ್ರ ಸುಪುತ್ರನಾದರೆ, ದಢೇಸೂಗೂರು ಮಾನಸಪುತ್ರ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ಕಾರ್ಯಕರ್ತರನ್ನು ಬ್ರಿಟಿಷರಂತೆ ಓಡಸ್ತಿನಿ, ಆರ್‌ಎಸ್‌ಎಸ್ ಕೈ ಕತ್ತರಿಸಬೇಕು ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಧಮ್ಮಿದ್ದರೆ ಬಿಜೆಪಿ ಕಾರ್ಯಕರ್ತರನ್ನು ಟಚ್ ಮಾಡಲಿ ನೋಡೋಣ ಎಂದು ಶಾಸಕ ಬಸವರಾಜ ದಢೇಸೂಗೂರು ಸವಾಲು ಹಾಕಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಕಾರಟಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾವೇನು ಮಾತಿನಲ್ಲಿ ಕಡಿಮೆ ಇಲ್ಲ. ತಂಗಡಗಿ ಕನಕಗಿರಿ ಕ್ಷೇತ್ರಕ್ಕೆ ಬಂದಾಗ ಎಂಥ ಚಪ್ಪಲಿ ಹಾಕಿಕೊಂಡು ಬಂದಿದ್ದೆ ನನಗೆ ಗೊತ್ತು. 2008ರಲ್ಲಿ ನೀನು ಹಾಕಿಕೊಂಡಿದ್ದ ಚಪ್ಪಲಿ ಫೋಟೊ ನನ್ನ ಬಳಿ ಇವೆ. ಈಗ ಎಂಥ ಬೂಟ್ ಹಾಕ್ತಿಯ, ಆಗ ನಿನ್ನ ಚಪ್ಪಲಿ ಹೇಗಿದ್ದವು ಗೊತ್ತು. ನೀನು 2008ರಲ್ಲಿ ಉದ್ರಿ ಪೆಟ್ರೋಲ್ ಹಾಕಿಸಿದ್ದು ನನಗೆ ಗೊತ್ತಿದೆ. ಉದ್ರಿ ಪೆಟ್ರೋಲ್ ಹಾಕಿಸಿ ಇನ್ನೂ ಹಣ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ನನ್ನ ಆಸ್ತಿ ಎಷ್ಟು ಅಂತಾ ಲೆಕ್ಕ ಕೊಡ್ತಿನಿ? ನಿನ್ನ ಆಸ್ತಿ ಎಷ್ಟು ಅಂತಾ ಹೇಳು. ನಾನು ಹುಟ್ಟುತ್ತಲೇ ಶ್ರೀಮಂತ. ನೂರಾರು ಎಕರೆ ಜಮೀನು ಇದೆ. 2013ರಲ್ಲಿ ಚುನಾವಣೆಯಲ್ಲಿ ಸೋತಿದ್ದಕ್ಕೆ 2018ರಲ್ಲಿ ಜನ ನನಗೆ ದಾನ ಮಾಡಿ ಗೆಲ್ಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲೂ ಗೆಲ್ಲೋದು ಬಿಜೆಪಿನೇ. ಇದು ಸೂರ್ಯಚಂದ್ರರು ಇರುವಷ್ಟೇ ಸತ್ಯ. ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತಿನಿ. ಜನ ಮತ್ತು ದೈವಬಲ ಬಿಜೆಪಿ ಜೊತೆಗಿದೆ. ಸಹೋದರ ತಂಗಡಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪುಣ್ಯಾತ್ಮ, ದೊಡ್ಡಮನುಷ್ಯ ತಂಗಡಗಿಯವರು ಬಯಲಾಟದಲ್ಲಿ ಸಾರಥಿ ಪಾತ್ರ ಮಾಡುವಂತೆ ಕಾರ್ಯಕ್ರಮಗಳಲ್ಲಿ ಮಾತಾಡ್ತಾರೆ. ನಾವು ಸಾರಥಿಯನ್ನು ಎದುರಿಸುವುದಿಲ್ಲ. ಭೀಮ, ಕೀಚಕನಂಥವರನ್ನು ಎದುರಿಸುತ್ತೇವೆ. ಹಾಸ್ಯ ಪಾತ್ರ ಮಾಡುವುದನ್ನು ಬಿಟ್ಟು ದೊಡ್ಡ ಪಾತ್ರದಲ್ಲಿ ಮುಂದೆ ಬರಲಿ. ಆಗ ಹೇಗೆ ಎದುರಿಸುತ್ತೇವೆ ಎಂಬುದನ್ನು ನೋಡಲಿ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಜಿಪಂ ಮಾಜಿ ಸದಸ್ಯ ಸಾಲೋಣಿ ವೀರೇಶ್, ಬಿಜೆಪಿ ಮುಖಂಡರಾದ ನಾಗರಾಜ ಬಿಲ್ಗಾರ್, ಬಸವರಾಜಪ್ಪ, ಮಹಾಂತೇಶ ಸಜ್ಜನ, ಶ್ರೀಧರ ಕೆಸರಟ್ಟಿ ಮತ್ತಿತರರು ಇದ್ದರು.