28.3 C
Gadag
Sunday, December 3, 2023

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಇವತ್ತು ಶುಕ್ರವಾರ ಮುಂಜಾನೆ ಗದಗಿನ ನಗರಸಭೆ ಕಚೇರಿಗೆ ಹೋದ ಸಿಬ್ಬಂದಿ ಮತ್ತು ನಾಗರಿಕರು ಕನ್‌ಫ್ಯೂಸ್ ಆಗುವಂತಹ ಘಟನೆಯೊಂದು ನಡೆಯಿತು. ನಗರಸಭೆ ಆಯುಕ್ತರ ಕುರ್ಚಿಯಲ್ಲಿ ಅದ್ಯಾರೋ ಅಪರಿಚಿತ ವ್ಯಕ್ತಿ ಕುಳಿತು ಬಿಟ್ಟಿದ್ದಾರೆ.
ಸಿಬ್ಬಂದಿ, ನಾಗರಿಕರಿಗೇನೋ ಇದು ಆಶ್ಚರ್ಯದ ವಿಷಯ ಇರಬಹುದು. ಆದರೆ, ಪಟ್ಟಂತ ರಾತ್ರೋರಾತ್ರಿ ಈ ‘ಅನಾಮಧೇಯ’ರನ್ನು ಕರೆಸಿ ಮುಂಜಾನೆ ಹೊತ್ತಿಗೆ ಆಯುಕ್ತರ ಕುರ್ಚಿ ಮೇಲೆ ಕೂಡಿಸಿದ ಶಕ್ತಿ ಯಾವುದು ಎಂಬುದು ಗುಟ್ಟೇನೂ ಅಲ್ಲ.

ಆ ಶಕ್ತಿಯ ನೆರಳಿನಂತಿರುವ ಒಬ್ಬ ಲೋಕಲ್ ಬಿಜೆಪಿ ನಾಯಕನಿಗೆ ಮಾತ್ರ ಇದು ‘ಸಹಜ’ ವ್ಯವಹಾರ.
ಇಲ್ಲಿ ಬಂದು ಆಯುಕ್ತರ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಸರ್ಕಾರದ ಶಿಷ್ಟಾಚಾರ ನಿಯಮಗಳನ್ನು ಪಾಲಿಸಿದ್ದಾರೆಯೆ? ಎಂಬ ಪ್ರಶ್ನೆ ಈಗ ನಗರಸಭೆ ಸಿಬ್ಬಂದಿ ಮತ್ತು ಜನರನ್ನು ಕಾಡತೊಡಗಿದೆ. ಅದಕ್ಕೂ ಉತ್ತರವಿದೆ. ಅವರೂ ಸರ್ಕಾರದ ಆದೇಶ ಹಿಡಿದುಕೊಂಡೇ ಬಂದು ಇಲ್ಲಿ ಕುಳಿತಿದ್ದಾರೆ. ನಿನ್ನೆ ಸೆಪ್ಟೆಂಬರ್ 10 ರಂದು ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ರಮೇಶ್ ಜಾಧವರು, ಈಗ ಗದಗ ನಗರಸಭೆ ಆಯುಕ್ತರು!

ಇಲ್ಲಿವರೆಗೆ ಆಯುಕ್ತರಾಗಿದ್ದ ಮನ್ಸೂರ್ ಅಲಿಯವರಿಗೆ ಯಾವ ಹುದ್ದೆ ನೀಡಲಾಗಿದೆ? ಅವರಿಗೆ ವರ್ಗಾವಣೆಯ ಆದೇಶ ನೀಡಲಾಗಿದೆಯೆ ಎಂಬ ಪ್ರಶ್ನೆಗಳು ಎದ್ದಿದ್ದು, ಇದು ಅಂಧಾದುಂಧಿ ಟ್ರಾನ್ಸ್‌ಫರ್ ದಂಧೆಯನ್ನು ಬಯಲು ಮಾಡುತ್ತಿದೆ.

ಈ ಗುದುಮುರಗಿ ಜುಲೈನಲ್ಲೇ ಶುರುವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಹುದ್ದೆ ಮಟ್ಟದ ಅಧಿಕಾರಿ, ವಿಜಯಪುರ ಕಾರ್ಪೋರೇಷನ್ ನ ಕಂದಾಯ ಇಲಾಖೆ ಅಧಿಕಾರಿ ರಮೇಶ್ ಜಾಧವ್ ಅವರನ್ನು ಇಲ್ಲಿನ ನಗರಸಭೆ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಆಗ ಈ ಬಗ್ಗೆ ಸಾರ್ವಜನಿಕರಿಂದ ತಕರಾರು ಬಂದ ಕೂಡಲೇ ತಾತ್ಕಾಲಿಕವಾಗಿ ಅದನ್ನು ತಡೆ ಹಿಡಿಯಲಾಗಿತ್ತು.
ಆದರೆ ಈ ವರ್ಗಾವಣೆ ಮಾಡಿಸಿ ಚೊಲೊತನ್ಯಂಗ ರೊಕ್ಕ ಮಾಡಿದ್ದ (ಬಕೆಟ್ ಹಿಡಿದಿದ್ದ ಎಂದು ಓದಿಕೊಳ್ಳಬಹುದು) ಸ್ಥಳೀಯ ಬಿಜೆಪಿ ಮುಖಂಡನೊಬ್ಬನಿಗೆ ಇದು ಕಸಿವಿಸಿ ಉಂಟು ಮಾಡಿತ್ತು.

ಆಗ ಸಾಮಾಜಿಕ ಜಾಲತಾಣದಲ್ಲಿ, ‘ವರ್ಗಾವಣೆ ರದ್ದು’ ಎಂಬ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ‘ ತಾತ್ಕಾಲಿಕ ’ ಎಂದಿದ್ದರು. ಅಂದರೆ ವರ್ಗಾವಣೆ ತಡೆ ಆಗಿದ್ದು ಸಚಿವರಿಗೆ ಇಷ್ಟ ವಿರಲಿಲ್ಲ.

ಈಗ ರಮೇಶ ಜಾಧವ್ ಆಯುಕ್ತರಾಗಿರುವುದನ್ನು ನೋಡಿದರೆ, ಸಚಿವರು ತಮ್ಮ ಕಮಿಟ್‌ಮೆಂಟ್ ಪಾಲಿಸಿದ್ದಾರೆ. ಬಕೆಟ್ ಹಿಡಿದರು ಎನ್ನಲಾದ ಸ್ಥಳೀಯ ಬಿಜೆಪಿ ಮುಖಂಡ ಖುಷ್ ಖುಷಿಯಲ್ಲಿದ್ದಾರೆ.
ಇದೆಲ್ಲ ಹಾಳಾಗಲಿ, ಪ್ರವಾಹ, ಅತಿವೃಷ್ಟಿ ಪರಿಹಾರಕ್ಕೆ ಒಂದೂ ರೂಪಾಯಿಯನ್ನೂ ರಾಜ್ಯ ಸರ್ಕಾರದಿಂದ ತರಲಾಗದ ಸಚಿವರು ಗುರುವಾರ ಆಯುಕ್ತರ ನೇಮಕಾತಿ ಆದೇಶ ಹೊರಬೀಳಲು ತುಂಬ ‘ಬೆವರು’ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts