25.8 C
Gadag
Saturday, June 10, 2023

ನನಗೀಗ ಎಪ್ಪತ್ತು, ಅಧಿಕಾರವೀಗ ಯುವಕರ ಸ್ವತ್ತು: ರಾಜಕೀಯ ನಿವೃತ್ತಿಯತ್ತ ಸಂಸದ ಕರಡಿ!

Spread the love

-ಮತದಾರರ ಆಶೋತ್ತರ ಈಡೇರಿಕೆಯತ್ತ ಗಮನವಿರಲಿ,-ಆಸೆ ಆಮೀಷಗಳಿಗೆ ಬಲಿಯಾಗಬೇಡಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಹಳೇ ಬೇರು, ಹೊಸ ಚಿಗುರು ಎನ್ನುವ ಕಾಲಘಟ್ಟವಿದು. ನನಗೀಗ ಎಪ್ಪತ್ತು ವರ್ಷ ವಯಸ್ಸು. ಗ್ರಾಮ ಪಂಚಾಯತಿಗೆ ಚುನಾಯಿತರಾದವರೆಲ್ಲ ಯುವಕರಿದ್ದೀರಿ. ಅಧಿಕಾರ ಈಗೇನಿದ್ದರೂ ಯುವಕರ ಸ್ವತ್ತು. ನಿಮಗೆ ಸರಿಯಾದ ಮಾರ್ಗದರ್ಶನ ನೀಡಲು ನಾವು ಸಿದ್ಧರಿದ್ದೇವೆ. ಮತದಾರರ ವಿಶ್ವಾಸ ಉಳಿಸಿಕೊಂಡು ಎತ್ತರೆತ್ತರಕ್ಕೆ ಚುನಾಯಿತರು ಬೆಳೆಯಬೇಕು ಎಂದು ಸಂಸದ ಕರಡಿ ಸಂಗಣ್ಣ‌ ಕರೆ ನೀಡಿದರು.

ನಗರದ ಎಂಪಿ ಪ್ಯಾಲೇಸ್‌ನಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯತ ಬಿಜೆಪಿ ಬೆಂಬಲಿತ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯ ವಿವಿಧ ಗ್ರಾಮ‌ ಪಂಚಾಯಿತಿಗಳಿಗೆ ಹೊಸದಾಗಿ ಆಯ್ಕೆ ಯಾಗಿರುವ ಬಿಜೆಪಿ‌ ಬೆಂಬಲಿತ ಸದಸ್ಯರು ಯಾವುದೇ ಆಸೆ ಆಮೀಷಗಳಿಗೆ ಬಲಿಯಾಗದೇ, ಮತದಾರರ ಆಶೋತ್ತರ ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಇಂದು ಎಲ್ಲೆಡೆ ಭ್ರಷ್ಟಾಚಾರ ಮಿತಿ‌ ಮೀರಿದೆ. ಅದಕ್ಕೂ ಅಂತ್ಯಕಾಲ ಇದ್ದೇ ಇರುತ್ತೆ. ಭ್ರಷ್ಟಾಚಾರದ ಆಡಳಿತದಿಂದ ಜನತೆಯ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಕಳಂಕರಹಿತ, ಜನಪರ ಕೆಲಸ ಸದಾ ನಮ್ಮನ್ನು ಬೆಳೆಸುತ್ತದೆ. ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರು ಶ್ರಮಿಸುವ ಮೂಲಕ ಗಾಂಧಿ ಕಂಡ ಕನಸನ್ನು ನನಸಾಗಿಸಬೇಕು ಎಂದು ಕಿವಿ ಮಾತು ಹೇಳಿದರು.

ಮನೆಗಳು ಸೇರಿದಂತೆ ಸರಕಾರದಿಂದ ಬರುವ ಯೋಜನೆಗಳನ್ನು ಬಡಜನರಿಗೆ ಮುಟ್ಟಿಸುವ ಕೆಲಸ ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಇದು ನಮಗೆಲ್ಲ ಸಿಕ್ಕಿರುವ ಸದಾವಕಾಶ. ಸಿಎಂ ಯಡಿಯೂರಪ್ಪನವರು ಸೇರಿದಂತೆ ಇತರರು ಜಿಲ್ಲೆಗೆ ಆಗಮಿಸಲಿದ್ದಾರೆ. ಅವರು ನಮ್ಮ ಕೆಲಸ ನೋಡಿ ಬೆನ್ನು ತಟ್ಟಿ ಇತರರಿಗೆ ಮಾದರಿ ಎನ್ನುವಂತೆ ಕೆಲಸ ಮಾಡಬೇಕು ಎಂದು ಹುರಿದುಂಬಿಸಿದರು.

ಆತ್ಮನಿರ್ಭರ ಯೋಜನೆಯಡಿಯಲ್ಲಿ 25 ಸಾವಿರ ಜನರಿಗೆ ಉದ್ಯೋಗವಕಾಶ ಸಿಗಲಿದೆ. ಕೊಪ್ಪಳದ ಏತ ನೀರಾವರಿ, ಸಿಂಗಟಾಲೂರ ಏತನೀರಾವರಿ ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂದಿಸಿದಂತೆ ನಮಗೆ ಸಾಕಷ್ಟು ಯೋಜನೆಗಳು, ಕನಸುಗಳಿವೆ. ಭ್ರಷ್ಟಾಚಾರ ಮಾಡಿದರೆ ಮುಂದೊಂದು ದಿನ ಅದು ಶಾಪವಾಗಿ ಕಾಡುತ್ತೆ. ಜನತಾ ಮನೆಗಳ ಕಾನ್ಸೆಪ್ಟ್‌ನ್ನು ನಿಮ್ಮೆಲ್ಲರ ಪರವಾಗಿ ಮಾಡುತ್ತೇವೆ. 8 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಇವತ್ತು ನಾವು ಇರಬಹುದು, ನಾಳೆ ಇರಲಿಕ್ಕಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ ಎಂದು ಸ್ಫೂರ್ತಿ ತುಂಬಿದರು.

ಚುನಾಯಿತರಿಗೆ ಹಲವು ಸಂದರ್ಭಗಳಲ್ಲಿ ಹಣದ ಆಮೀಷ ನೀಡಲಾಗುತ್ತೆ. ನಮ್ಮ ಆಡಳಿತಾವಧಿಯಲ್ಲಿ ಹಣವೊಂದೇ ಮುಖ್ಯವಲ್ಲ. ಮುಂದಿನ ಅವಧಿಗೂ ಆಯ್ಕೆಯಾಗುವಂತೆ ಕೆಲಸ ಮಾಡಿದರೆ ಗ್ರಾಮ ಅಭಿವೃದ್ದಿಯಾಗುತ್ತೆ. ಎಲ್ಲರೂ ನಾಯಕತ್ವ ಗುಣವನ್ನು ರೂಢಿಸಿಕೊಳ್ಳಬೇಕು. ಕೊಪ್ಪಳ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ, ಅಮರೇಶ ಕರಡಿ, ಈಶಣ್ಣ ಮಾದಿನೂರ, ಲಕ್ಷ್ಮೀ ಕಂದಾರಿ, ಪ್ರದೀಪ ಹಿಟ್ನಾಳ, ಸಿದ್ದೇಶ್ ಬಸವರಾಜ್ ಭೋವಿ, ಕರಿಯಪ್ಪ ಮೇಟಿ ಸೇರಿದಂತೆ ಇತರರು ಮಾತನಾಡಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭಾಗವಹಿಸಿದ್ದರು. ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಹಾಂತೇಶ ಮಾಲಿಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಗಣೇಶ ಹೊರತಟ್ನಾಳ ಕಾರ್ಯಕ್ರಮ ನಿರ್ವಹಿಸಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Posts