ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ:
ನರೇಗಾ ಅಡಿಯಲ್ಲಿ ವೈಯಕ್ತಿಕ ತೋಟಗಾರಿಕೆ ಮಾಡಿಕೊಳ್ಳಲು ರೈತ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ಚೌಗಲಾ ತಿಳಿಸಿದರು.
ತಾಲೂಕಿನ ಹೊಸಬೂದಿಹಾಳ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ತೋಟಗಾರಿಕೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿಯ ಪ್ರತಿ ಗ್ರಾಪಂ ವತಿಯಿಂದ 10 ಜನ ಫಲಾನುಭವಿಗಳನ್ನು ಆಯ್ಕೆ ಮಾಡಬಹುದಾಗಿದೆ ಎಂದರು.
ಎನ್‌ಆರ್‌ಇಜಿಯಡಿಯಲ್ಲಿ ಒಂದು ತೋಟ ನಿರ್ಮಾಣ ಕಾರ್ಯವನ್ನು ಫಲಾನುಭವಿಗಳು ಆರು ದಿನದೊಳಗಾಗಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಎನ್‌ಆರ್‌ಇಜಿ ಅಡಿಯಲ್ಲಿ ಪ್ರತಿ ಕೂಲಿಕಾರ್ಮಿಕರಿಗೆ 275 ರೂ.ಗಳಂತೆ ಒಟ್ಟು ಆರು ದಿನದ ಕೂಲಿ 1658 ರೂ ನೀಡಲಾಗುವುದು.
ಒಟ್ಟು 13 ಸಸಿಗಳಾದ ತೆಂಗು ಮಾವು, ಚಿಕ್ಕು ಹಾಗೂ ಲಿಂಬು, ಕರಿಬೇವು, ನುಗ್ಗೆ, ಪಪ್ಪಾಯಿ, ಫೇರು ಇವುಗಳನ್ನು ನಾಟಿ ಮಾಡಿಕೊಳ್ಳಬಹುದು. ಫಲಾನುಭವಿಗಳು ಇವುಗಳನ್ನು ಮನೆಯ ವರಾಂಡವಿದ್ದಲ್ಲಿ ಮನೆಯ ಮುಂದೆ ಮತ್ತು ಹಿತ್ತಲಿನ ಜಾಗದಲ್ಲಿ ತೋಟ ನಿರ್ಮಾಣ ಮಾಡಿಕೊಳ್ಳಬಹುದು.
ಫಲಾನುಭವಿಗಳು ಸಸಿ ಮತ್ತು ಇತರ ಸಾಮಗ್ರಿಗಳ ಖರ್ಚು ಸ್ವಂತ ಮಾಡಿಕೊಳ್ಳಭೇಕು. ನಂತರ ಫಲಾನುಭವಿಗಳ ಖಾತೆಗೆ ಸಾಮಗ್ರಿ ವೆಚ್ಚವಾಗಿ 749 ರೂ ತೋಟಗಾರಿಕೆ ಇಲಾಖೆಯಿಂದ ಜಮೆ ಮಾಡಲಾಗುವುದು ಎಂದು ಚೌವ್ಹಾಣ ತಿಳಿಸಿದರು. ತೋಟಗಾರಿಕೆ ನಿರ್ಮಾಣಮಾಡಿಕೊಳ್ಳಲು ಈಗಾಗಲೇ ಸುಮಾರು 200 ರೈತರಿಂದ ಅರ್ಜಿ ಬಂದಿವೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಸಂಪರ್ಕೀಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಆನಂದ ನರಸನ್ನವರ, ತಾಂತ್ರಿಕ ಸಹಾಯಕ ಮುತ್ತು ಕಟ್ಟಿ, ನರೇಗಾ ಸಹಾಯಕ ಅಧಿಕಾರಿ ಪೂರ್ಣಾನಂದ ಸುಂಕದ, ಮಂಜುನಾಥ ಅಳಗವಾಡಿ, ಬಸವರಾಜ ಅಳಗವಾಡಿ, ಬಾಬೂ ಮಾನೆ, ಕೃಷ್ಣಪ್ಪ ಚವ್ಹಾಣ ಉಪಸ್ಥಿತರಿದ್ದರು.