ವಿಜಯಸಾಕ್ಷಿ ಸುದ್ದಿ, ಕೋಲಾರ: ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯೆಯ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.
ಚುನಾವಣೆ ಮುಗಿದರೂ ಅದರ ಕಾವು ಆರಿಲ್ಲ ಎನ್ನುವಂತಹ ಈ ಘಟನೆ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ರಾಜೆಂದ್ರಹಳ್ಳಿಯಲ್ಲಿ ನಡೆದಿದೆ.
ಶನಿವಾರ ನೂತನವಾಗಿ ಗ್ರಾಮಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನೂರ್ ಜಹಾನ್ ಎಂಬುವವರ ಮನೆಗೆ ಬೆಂಕಿ ಹಚ್ಚಲಾಗಿದೆ. ಇವರು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ವಿರೋಧಿ ಗುಂಪಿನವರು ಬೆಂಕಿ ಹಚ್ಚಿದ್ದಾರೆ ಎಂದು ನೂರ್ ಜಹಾನ್ ಆರೋಪ ಮಾಡಿದ್ದಾರೆ.
ಹೆಂಚಿನ ಮನೆಯಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉದ್ದೇಶ ಪೂರ್ವಕವಾಗಿ ಕಿಟಕಿ ಮೂಲಕ ಒಣ ಹುಲ್ಲನ್ನು ಹಾಕಿ ಬೆಂಕಿ ಹಾಕಲಾಗಿದೆ.
ಸ್ಥಳಕ್ಕೆ ಮುಳಬಾಗಲು ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.