ಪಂಚಮಸಾಲಿ 2ಎ ಹೋರಾಟ, ಗುಡುಗು ಸಿಡಿಲಿಗೆ ಹೆಸರಾದ ಯತ್ನಾಳ ಶೀಘ್ರದಲ್ಲೇ ಎಂಟ್ರಿ: ಜಯಮೃತ್ಯುಂಜಯಶ್ರೀ

0
Spread the love

ಮೀಸಲಾತಿ ಕಲ್ಪಿಸುವ ಪರಮಾವಧಿಕಾರ ಸಿಎಂಗಿದೆ.

Advertisement

ಕೊಪ್ಪಳ ಜಿಲ್ಲೆ ಗಡಿ ದಾಟೋದರೊಳಗೆ ಸರಕಾರ ಸಿಹಿ ಸುದ್ದಿ ನೀಡಲಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶಾಸಕ‌ ಬಸನಗೌಡ ಯತ್ನಾಳ ಗುಡುಗು ಸಿಡಿಲು ಹಾಕೋದರಲ್ಲಿ ನಿಸ್ಸೀಮರು. ಈಗಾಗಲೇ ಅವರು ಗುಡುಗು ಆರಂಭಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಕರಡಿ ಸಂಗಣ್ಣ, ಸಚಿವ ಸಿ.ಸಿ.ಪಾಟೀಲ ಸರಕಾರದ ಜೊತೆ ಮಾತನಾಡಲಿ, ಸರಕಾರ ಸ್ಪಂದಿಸದಿದ್ದರೆ ನಂತರ ತಾವು ಎಂಟ್ರಿಯಾಗುವುದಾಗಿ ಶಾಸಕ ಬಸನಗೌಡ ಯತ್ನಾಳ ತಿಳಿಸಿದ್ದಾರೆಂದು ಪಂಚಮಸಾಲಿ ಪೀಠದ ಬಸವ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದರು.

ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ಪಂಚಮಸಾಲಿ ಸಮಾಜದ ಪಂಚಲಕ್ಷ ಹೆಜ್ಜೆ, 2ಎ ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಈಗಾಗಲೇ ಲಿಂಗಾಯತದಡಿ ಇದ್ದ ಹಲವು ಸಮಾಜಗಳು ಮೀಸಲಾತಿ ಪಡೆದುಕೊಂಡಿವೆ. ಮೂರ್ನಾಲ್ಕು ಸಮಾಜಗಳು ಮಾತ್ರ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಸದ್ಯ ಇದು ಶಾಂತಿಯುತ ಹೋರಾಟ. ಸರಕಾರ ನಮ್ಮ ಹೋರಾಟ ಉದಾಸೀನ ಮಾಡಿದರೆ ಯತ್ನಾಳ ಜೊತೆಗೂಡುತ್ತಾರೆ. ಹೋರಾಟ ತೀವ್ರವಾಗುತ್ತದೆ ಎಂದರು.

ಈಗಾಗಲೇ ಹಾಲುಮತ ಸಮಾಜ ಬಾಂಧವರು ಎಸ್ಟಿ ಮೀಸಲಾತಿಗಾಗಿ, ವಾಲ್ಮೀಕಿ ಸಮಾಜದವರು 3.5 ಮೀಸಲಾತಿಯನ್ನು 7.5ಗೆ ಹೆಚ್ಚಿಸುವ ಹೋರಾಟ ತೀವ್ರಗೊಳಿಸಿದ್ದಾರೆ. ಈ ಎರಡು ಸಹೋದರ ಸಮಾಜಗಳಿಗೆ ಮೀಸಲಾತಿ ಸಿಕ್ಕೇ ಸಿಗುತ್ತೆ. ಅಲ್ಲಿ ಖಾಲಿಯಾಗುವ ಸ್ಥಾನವನ್ನು ಪಂಚಮಸಾಲಿ ಸಮಾಜಕ್ಕೆ ಮೀಸಲಿಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

ದೇವೇಗೌಡರು ತಮ್ಮ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಅನೇಕ ಸೌಕರ್ಯ ಒದಗಿಸಿದ್ದರಿಂದ ಒಕ್ಕಲಿಗ ಸಮುದಾಯದಲ್ಲಿ ಅವರೊಬ್ಬ ಪ್ರಶ್ನಾತೀತ ನಾಯಕ ಎನಿಸಿದ್ದಾರೆ. ದೇವರಾಜ ಅರಸ್ ಅವರು ಹಿಂದುಳಿದ ಸಮಾಜಗಳಿಗೆ 3ಬಿ ಮೀಸಲಾತಿ ನೀಡಿದ್ದರಿಂದ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ನಂತರ ಬಂದ ಮುಖ್ಯಮಂತ್ರಿಗಳಿಗೆ ಮೀಸಲಾತಿ ಕಲ್ಪಿಸುವ ಭಾಗ್ಯ ಬಂದಿರಲಿಲ್ಲ.

ಈಗ ಸಿಎಂ ಆಗಿರುವ ಯಡಿಯೂರಪ್ಪ ಅವರಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಅವಕಾಶ ಒದಗಿ‌ ಬಂದಿದೆ. ಯಡಿಯೂರಪ್ಪ ಅವರು ಹಾಲುಮತ, ವಾಲ್ಮೀಕಿ ಹಾಗೂ ಪಂಚಮಸಾಲಿ ಸಮಾಜಗಳಿಗೆ ಮೀಸಲಾತಿ ನೀಡಿದರೆ ಎಲ್ಲ ಸಮಾಜಬಾಂಧವರು ಅವರಿಗೆ ಋಣಿಯಾಗಿ ಇರುತ್ತಾರೆ. ಪಂಚಮಸಾಲಿ ಸಮಾಜ ಬಸವಣ್ಣ, ಕಿತ್ತೂರು ಚನ್ನಮ್ಮ ಅವರಿಗೆ ನೀಡಿದ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ನೀಡುತ್ತೆ ಎಂದು ನುಡಿದರು.

ಈ ಹೋರಾಟದ ಹೆಜ್ಜೆ ಇಂದು-ನಿನ್ನೆಯದಲ್ಲ. ಸುಮಾರು 20 ವರ್ಷಗಳಿಂದಲೂ ಕೂಗಿತ್ತು. ಕೊರೊನಾ ಬಂದಿದ್ದರಿಂದ ಅದು ಕಿಚ್ಚಾಗಿ ಪಾದಯಾತ್ರೆ ಹೋರಾಟದ ರೂಪ ಪಡೆದಿದೆ. ಕೊರೊನಾ ಕಾಲದಲ್ಲಿ ಮನೆಯಲ್ಲಿ ಖಾಲಿ ಕೂತ ಸಮಾಜದ ಯುವಕರು ಹೋರಾಟದ ರೂಪು-ರೇಷೆ ಹಾಕಿದರು. ಅದೀಗ ಕಾರ್ಯರೂಪಕ್ಕೆ ಬಂದಿದೆ. ಸಿಎಂ ಅವರು ಸಹ ವಾರದವರೆಗೆ ಪಾದಯಾತ್ರೆ ಮುಂದೂಡಲು ಮನವಿ ಮಾಡಿದರು. ಬಹುಶಃ ಇನ್ನೊಂದೆರಡು ದಿನಗಳಲ್ಲಿ ಅವರು ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ ಇದೆ. ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲು ಈ ಪಾದಯಾತ್ರೆ ಸಹಕಾರಿ ಎಂದು ಶ್ರೀಗಳು ತಿಳಿಸಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನ್ಯಾಯ ಕೇಳಿ ಕೇಳಿ ಸಾಕಾಗಿದೆ. ಈಗೇನಿದ್ದರೂ ವಿಧಾನಸೌಧದ ಒಳಗೆ ಪ್ರವೇಶಿಸಿ ಮೀಸಲಾತಿ ಪಡೆಯಬೇಕಿದೆ. ಪಂಚಮಸಾಲಿ ಸಮಾಜದ ಕೈ ಸದಾ ಮೇಲಿರುತ್ತೆ. ಕೊಡುಗೈ ಅವರದ್ದು. ಜೇಬಿನಲ್ಲಿ‌ ನೂರು ರೂಪಾಯಿ ಇದ್ದರೂ ಸಾಲ ಮಾಡಿ ಸಾವಿರ ರೂಪಾಯಿ ದಾನ ಮಾಡುವ ದೌಲತ್ತು ಪಂಚಮಸಾಲಿಗಳದ್ದು. ಅದಕ್ಕೆ ಇವತ್ತು ಮೀಸಲಾತಿಗೆ ಹೋರಾಡುವ ಅನಿವಾರ್ಯತೆ ಬಂದಿದೆ. ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಲ್ಲ ಎಂದರು.

ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಳಕನಗೌಡ, ಜಿಪಂ ಸದಸ್ಯ‌ ಗವಿಸಿದ್ದಪ್ಪ ಕರಡಿ ಮತ್ತಿತರರು ಇದ್ದರು.

ಅದ್ಧೂರಿ ಸ್ವಾಗತ
ಕುಕನೂರು‌ ತಾಲೂಕಿನ ಮಂಗಳೂರಿನಿಂದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮಕ್ಕೆ ಪಾದಯಾತ್ರೆ ಮಂಗಳವಾರ ಪ್ರವೇಶಿಸಿದ್ದು, ಗ್ರಾಮದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಸಮಾಜದ ಹಲವರ ಮನೆಗಳಿಗೆ ಭೇಟಿ ನೀಡಿದ ಶ್ರೀಗಳ ಪಾದಪೂಜೆ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here