ದುರ್ಗಪ್ಪ ಹೊಸಮನಿ
ವಿಜಯಸಾಕ್ಷಿ ವಿಶೇಷ, ಗದಗ
ತಾಲೂಕಿನ ಹೊಂಬಳ ರಸ್ತೆಯಲ್ಲಿ ಸುಮಾರು 162 ಎಕರೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸೂಕ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿಲ್ಲದೆ ನರಳುತ್ತಿದೆ. ಅನುದಾನದ ಅಭಾವದಿಂದಾಗಿ ಮೂಲಸೌಲಭ್ಯಗಳ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಆರಂಭದಿಂದಲೂ ಮಹಾವಿದ್ಯಾಲಯ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ.
ಬೀದರ್‌ನಲ್ಲಿರುವ ರಾಜ್ಯದ ಏಕೈಕ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು) ಸಹಿತ ರಾಜ್ಯದ ಬಹುತೇಕ ಪಶು ಮಹಾವಿದ್ಯಾಲಯಗಳದ್ದು ಇದೇ ಗೋಳಾಗಿದೆ ಎನ್ನಲಾಗಿದೆ.
ಮೂಲ ಸೌಲಭ್ಯಗಳ ಹಾಗೂ ಬೋಧಕ ಸಿಬ್ಬಂದಿಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಗದಗದಲ್ಲಿ ಪಶುವೈದ್ಯಕೀಯ ಕಾಲೇಜು ಇದ್ದೂ ಇಲ್ಲದಂತೆ ಭಾಸವಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮೊದಲ ಸೆಮಿಸ್ಟರ್‌ಗೆ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡನೇ ಸೆಮಿಸ್ಟರ್‌ನಲ್ಲಿ 50, ಮೂರನೇ ಸೆಮಿಸ್ಟರ್‌ನಲ್ಲಿ 48, ನಾಲ್ಕನೇ ಸೆಮಿಸ್ಟರ್‌ನಲ್ಲಿ 45 ಸೇರಿ ಸುಮಾರು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಉಪನ್ಯಾಸಕರ ಕೊರತೆ:
ಭಾರತೀಯ ಪಶುವೈದ್ಯಕೀಯ ಮಂಡಳಿ (ವಿಸಿಐ) ಪ್ರಕಾರ ಪಶುವೈದ್ಯಕೀಯ ಮಹಾವಿದ್ಯಾಲಕ್ಕೆ ಒಟ್ಟು 76 ಬೋಧಕ ಸಿಬ್ಬಂದಿಯ ಅವಶ್ಯಕತೆ ಇದೆ. ಆದರೆ, ಇಲ್ಲಿ ಕೇವಲ 22 ಜನ ನಿಯಮಿತ, 10-12 ಜನ ಉಪನ್ಯಾಸಕರು ಒಪ್ಪಂದದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಪರ‍್ಯಾಪ್ತ ಸಂಖ್ಯೆಯ ಬೋಧಕ ಸಿಬ್ಬಂದಿ ಇಲ್ಲದಿದ್ದರೂ ಇದ್ದವರೇ ಅದು ಹೇಗೋ ಪಾಠ ಪ್ರವಚನಗಳನ್ನು ನಿರ್ವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬಹುದೊಡ್ಡ ಪೆಟ್ಟು ಬೀಳುವ ಸಾಧ್ಯತೆಗಳಿವೆ.
17 ಬೋಧನಾ ವಿಭಾಗಗಳು:
ಪಶುವೈದ್ಯಕೀಯ ಮಹಾವಿದ್ಯಾಲಯ 2005ರಲ್ಲಿ ಮಂಜೂರಾಗಿದ್ದರೂ, 2017ರಲ್ಲಿ 50 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡಿದ್ದು, ಇದರಲ್ಲಿ ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಪಶುವೈದ್ಯಕೀಯ ಶರೀರ ಶಾಸ್ತ್ರ ಮತ್ತು ಜೀವರಾಸಾಯನಿಕತೆ, ಪಶುವೈದ್ಯಕೀಯ ಪರಾವಲಂಬಿ ಶಾಸ್ತ್ರ ಸಹಿತ ಒಟ್ಟು 17 ಬೋಧನಾ ವಿಭಾಗಗಳಿವೆ.
ನೇಮಕಾತಿ ಆದೇಶಿಸದಿದ್ದರೆ ಕಷ್ಟ:
ಸರ್ಕಾರ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡಲು ಅನುಮತಿ ನೀಡದಿದ್ದರೆ, ಬಹಳಷ್ಟು ಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಲ್ಲಿ ನೌಕರರ ನೇಮಕಾತಿ ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ, ಭಾರತೀಯ ಪಶುವೈದ್ಯಕೀಯ ಪರಿಷತ್ ಮಹತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಬೀದಿ ಪಾಲಾಗುವ ಸಾಧ್ಯತೆಗಳಿವೆ ಎಂದು ಸ್ವತಃ ಪಶುವೈದ್ಯಕೀಯ ಕುಲಸಚಿವರೇ ಅಳಲು ತೋಡಿಕೊಂಡಿದ್ದಾರೆ.
67 ಕೋಟಿ ರೂ.ಗೆ ಪ್ರಸ್ತಾವನೆ
ಪಶುವೈದ್ಯಕೀಯ ಕಾಲೇಜಿನ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿಗೆ ಅನುದಾನದ ಆವಶ್ಯಕತೆ ಇದೆ. ಮಹಾವಿದ್ಯಾಲಯದಿಂದ ಒಟ್ಟು 67 ಕೋಟಿ ರೂ. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ ಅವರಿಗೂ ಮನವಿ ಮಾಡಲಾಗಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ 360 ಕೋಟಿ ರೂ. ಅನುದಾನ ಮೀಸಲಿಡುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಗದಗನಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸಲಾಗಿದ್ದು, ಅಲ್ಲಿ ಪಾಠ ಮಾಡಲು ಸಹಿತ ಬೋಧಕ ಸಿಬ್ಬಂದಿಗಳಿಲ್ಲ. ಬಹಳ ಕಷ್ಟಪಟ್ಟು ಇರುವವರಲ್ಲಿಯೇ ನಿರ್ವಹಿಸಿಕೊಂಡು ಹೋಗಲಾಗುತ್ತಿದೆ.
ಪ್ರೊ|ನಾರಾಯಣಸ್ವಾಮಿ, ಕುಲಪತಿ, ಪಶು ವೈದ್ಯಕೀಯ ವಿವಿ ಬೀದರ