ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಸಾವಿರಾರು ಕೋಟಿ ರೂ.ಗಳನ್ನು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದು ಈಗ ಹಳೆಯ ವಿಷಯ. ಈಗ ಆರ್‌ಟಿಐ ಮೂಲಕ ಹೊರ ಬಂದ ಹೊಸ ಸತ್ಯ ಏನೆಂದರೆ ದೇಶದ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಹಳ್ಳಿ ಮಕ್ಕಳಿಗಾಗಿ ಇರುವ ನವೋದಯ ಶಾಲೆಗಳು ಪಿಎಂ-ಕೇರ‍್ಸ್ಗೆ 21.81 ಕೋಟಿ ರೂ. ದೇಣಿಗೆ ನೀಡಿವೆ.
ಇದು ದೇಣಿಗೆಯೋ ಅಥವಾ ಅಧಿಕಾರ ಬಳಸಿ ಒತ್ತಾಯದಿಂದ ನಡೆಸಿದ ವಸೂಲಿಯೋ ಎಂಬ ಪ್ರಶ್ನೆ ಎದ್ದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ಹಿಂದೆ ಆಗಸ್ಟ್ 19ರಂದು ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಪ್ರಕಾರ, 38 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು 2,105 ಕೋಟಿ ರೂ. ದೇಣಿಗೆ ನೀಡಿವೆ. ಸಾಮಾಜಿಕ ಜವಾಬ್ದಾರಿ ನಿಧಿಯ ಹಣವನ್ನು ಈ ಕಂಪನಿಗಳು ಪಿಎಂ-ಕೇರ‍್ಸ್ಗೆ ನೀಡಿದ್ದವು. ಈ ಕಂಪನಿಗಳಿಗೂ ದೇಣಿಗೆ ನೀಡಲೇಬೇಕೆಂಬ ಮೌಖಿಕ ಆದೇಶವಿತ್ತು ಎನ್ನಲಾಗಿದೆ.
ಪಿಎಂ-ಕೇರ‍್ಸ್ ನಿಧಿಯ ವಿವರಗಳನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತ ಬಂದಿದೆ. ಹೀಗಾಗಿ ಸ್ವತ: ಇಂಡಿಯನ್ ಎಕ್ಸ್ ಪ್ರೆಸ್ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಆರ್‌ಟಿಐ ಸಲ್ಲಿಸಿ ಈ ಮಾಹಿತಿ ಪಡೆದಿತ್ತು. ಈಗ ನವೋದಯ ಸೇರಿದಂತೆ ಇತರ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಪ್ರಕಾರ, ಈ ಸಂಸ್ಥೆಗಳಿಂದ 21.81 ಕೋಟಿ. ರೂ ದೇಣಿಗೆ ಹರಿದು ಬಂದಿದೆ.
ಯಾವುದೇ ನಿಧಿ ಇರಲಿ, ಅದಕ್ಕೆ ಸ್ವ ಇಚ್ಛೆಯಿಂದ ಬಂದ ದೇಣಿಗೆ ಮಾತ್ರ ಸ್ವೀಕರಿಸಬೇಕು. ಆದರೆ ಸಾರ್ವಜನಿಕರಿಗೇ ಸೇರಿದ ಕಂಪನಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ದೇಣಿಗೆ ಪಡೆಯುವುದು ವಿಚಿತ್ರವಾಗಿದೆ ಅಲ್ಲವೆ?