HomeGadag Newsಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್...

ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮನೆಯಲ್ಲಿ ಹೈಸ್ಕೂಲ್‌ ಗಿಂತ ಜಾಸ್ತಿ ಓದಿದವರಿಲ್ಲ. ಸಾಮಾನ್ಯ ರೈತ ಕುಟುಂಬ. ಅತಿ ಹಿಂದುಳಿದ ತಾಲೂಕಿನ ಹಿಂದುಳಿದ ಗ್ರಾಮದ ನಿವಾಸಿ.
ಇವು ಯಾವುದೂ ಸಹನಾ ಎಂಬ ಯುವತಿಗೆ ಅಡ್ಡಿಯಾಗಲಿಲ್ಲ. ಶುಕ್ರವಾರ ಪ್ರಕಟವಾದ ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 26ನೇ ರ‍್ಯಾಂಕ್ ಗಳಿಸುವ ಮೂಲಕ ಪಿಎಸ್‌ಐ ಆಗುತ್ತಿದ್ದಾಳೆ ಸಹನಾ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರು ಗ್ರಾಮದ ಸಹನಾ ಫಕ್ಕೀರಗೌಡ ಪಾಟೀಲ್ ಈ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ಯುವಜನರಿಗೆ ಅದರಲ್ಲೂ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ.

ಇಬ್ಬರು ಅಕ್ಕಂದಿರು ಹೈಸ್ಕೂಲ್‌ವರೆಗೆಷ್ಟೇ ಓದಿ ಮದುವೆಯಾಗಿ ಹೋದರು. ಅಣ್ಣಂದಿರು ಕಾಲೇಜ್ ಮೆಟ್ಟಿಲು ಹತ್ತದೇ, ಕೃಷಿಯಲ್ಲಿ ನಿರತರಾದರು. ಗ್ರಾಮಗಳ ಬಹುಪಾಲು ಕುಟುಂಬಗಳು ಹೆಣ್ಣು ಮಕ್ಕಳನ್ನು ಬಹಳವೆಂದರೆ ಪಿಯುಸಿವರೆಗೆ ಓದಿಸಿ, ಮದುವೆ ಮಾಡಿ ಗಂಡನ ಮನೆಗೆ ಕಳಿಸುತ್ತಾರೆ. ಆದರೆ ಸಹನಾ ಮನೆಯವರು ಎಂದೂ ಓದಿಗೆ ತಡೆ ಹಾಕಲಿಲ್ಲ.

‘ನಮ್ ಮನಿಮಂದಿ ಸಪೋರ್ಟೆ ಇದಕ್ಕೆಲ್ಲ ಕಾರಣ ನೋಡ್ರಿ. ಎಂಎ ಓದಲು ಧಾರವಾಡಕ್ಕೆ ಕಳಿಸಿದರು. ವಿದ್ಯಾಭಾಸದ ಖರ್ಚಿಗೆ ಹಿಂದೆಮುಂದೆ ನೋಡಲಿಲ್ಲ’ ಎಂದು ತನ್ನ ಮನೆಯವರ ಪ್ರೋತ್ಸಾಹವನ್ನು ನೆನೆಯುತ್ತಾರೆ ಸಹನಾ.

ಪಿಯುಸಿ ಹೊರತುಪಡಿಸಿ ಸಹನಾ ಓದಿದ್ದೆಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೇ. ಅವರ ಪೂರ್ತಿ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಿದೆ. ಇದು ಕೂಡ ನಮ್ಮ ಯುವಜನತೆಗೆ ಹೊಸ ಪ್ರೇರಣೆ ನೀಡಬಹುದು. ತೆಗ್ಗಿನ ಭಾವನೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಾಚೇನಹಳ್ಳಿ ಸರ್ಕಾರಿ ಹೈಸ್ಕೂಲ್‌ನಲ್ಲಿ ಪೌಢ ಶಿಕ್ಷಣ ಪಡೆದ ಸಹನಾ ಪಿಯುಸಿಯನ್ನು ಶಿರಹಟ್ಟಿಯ ಡಬಾಲಿ ಕಾಲೇಜಿನಲ್ಲಿ ಓದಿದರು. ನಂತರ ಶಿರಹಟ್ಟಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದಿದರು. ಐದು ವರ್ಷ ಸತತವಾಗಿ ತಮ್ಮೂರಿನಿಂದ ಶಿರಹಟ್ಟಿಗೆ ಬಸ್ ಪ್ರಯಾಣ ಮಾಡಿ ಕಾಲೇಜು ಮುಗಿಸಿದರು.
ಆಕೆಯ ಬಹುಪಾಲು ಸಹಪಾಠಿಗಳು ಪದವಿ ನಂತರ ಓದನ್ನು ನಿಲ್ಲಿಸಿದರೆ, ಸಹನಾ ಎಂಎ ಓದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೇರಿದರು.

ಎಕನಾಮಿಕ್ಸ್ ನಲ್ಲಿ ಎಂಎ ಮುಗಿಸಿದ ನಂತರ ತೆಗ್ಗಿನ ಭಾವನೂರಿಗೆ ಮರಳಿದ ಸಹನಾ, ಮನೆಯಲ್ಲೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದತೊಡಗಿದರು. ಇದು ಪಿಎಸ್‌ಐ ಪರೀಕ್ಷೆಯಲ್ಲಿ ಅವರ 2ನೇ ಪ್ರಯತ್ನ. ಮಾರ್ಚ್ 8ರಂದು ಕೊರೋನಾ ಸಂಕಷ್ಟದ ನಡುವೆ 300 ಹುದ್ದೆಗಳಿಗಾಗಿ ನಡೆದ ಪಿಎಸ್‌ಐ ಪರೀಕ್ಷೆಯನ್ನು ಲಕ್ಷಾಂತರ ಅಭ್ಯರ್ಥಿಗಳು ಬರೆದಿದ್ದರು. ತೀವ್ರ ಸ್ಪರ್ಧೆಯ ನಡುವೆಯೂ ಸಹನಾ ಮಹಿಳಾ ಕೆಟಗರಿಯಲ್ಲಿ 26ನೇ ರ‍್ಯಾಂಕ್ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಅವರು, ‘ಮೊದಲಿನಿಂದಲೂ ಪೊಲೀಸ್ ಇಲಾಖೆ ಸೇರುವ ಬಯಕೆ ಇತ್ತು. ಈಗ ಅದು ಈಡೇರಿದೆ’ ಎಂದರು. ಯಾವುದೇ ಕೋಚಿಂಗ್ ಕೇಂದ್ರಕ್ಕೆ ಹೋಗದ ಸಹನಾ ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದರು. ಹಲವಾರು ಪುಸ್ತಕಗಳನ್ನು ರೆಫರ್ ಮಾಡಿದರು. ಮೊಬೈಲ್ ನೆರವಿನಿಂದ ಆನ್‌ಲೈನ್ ಮಾಹಿತಿಯನ್ನು ಅಭ್ಯಾಸ ಮಾಡಿದರು. ನಿಯತಕಾಲಿಕೆಗಳನ್ನು ತರಿಸಿ ಓದಿ ಅಪ್ಡೇಟ್ ಆದರು.
‘ನನಗೆ ಸದ್ಯಕ್ಕೆ ನಾನೇ ರೋಲ್ ಮಾಡೆಲ್. ಹಲವು ಅಧಿಕಾರಿಗಳ ಸಾಧನೆ ನೋಡಿದಾಗ ಅದರಿಂದ ಸ್ಪೂರ್ತಿ ಪಡೆದಿದ್ದೇನೆ. ನನ್ನ ಹೈಸ್ಕೂಲ್ ಶಿಕ್ಷಕರು ಸಾಕಷ್ಟು ಬೆಂಬಲ ನೀಡಿದರು’ ಎಂದು ಸಹನಾ ಹೇಳುತ್ತಾರೆ.

‘ಪೊಲೀಸ್ ಠಾಣೆಯಲ್ಲಿ ಗ್ರಾಮೀಣ ಭಾಗದ ಪ್ರಕರಣಗಳೇ ಜಾಸ್ತಿ. ಗ್ರಾಮಭಾಗದ ಸಾಮಾಜಿಕ ಸಂರಚನೆ ಮತ್ತು ಕುಟುಂಬಗಳ ಸಂಬಂಧಗಳನ್ನು ಹತ್ತಿರದಿಂದ ಬಲ್ಲ ನಮ್ಮಂಥವರು ಪಿಎಸ್‌ಐ ಹುದ್ದೆಯಲ್ಲಿದ್ದರೆ ಸಮಸ್ಯೆ ಬಗೆಹರಿಸುವುದು ಸುಲಭವಾಗುತ್ತದೆ. ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರಬೇಕು’ ಎಂದು ಸಹನಾ ಸಲಹೆ ನೀಡುತ್ತಾರೆ.

‘ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿದಷ್ಠೂ ಒಳ್ಳೆಯದೇ. ಒಬ್ಬ ಮಹಿಳಾ ಅಧಿಕಾರಿ ಮಹಿಳಾ ಸಂತ್ರಸ್ತರ ನೋವುಗಳನ್ನು ಸರಿಯಾಗಿ ಗ್ರಹಿಸಬಲ್ಲಳು. ನೊಂದ ಮಹಿಳೆಯರಿಗೆ ರಕ್ಷಣೆ, ನೆರವು ನೀಡುವುದೇ ನನ್ನ ಉದ್ದೇಶ’ ಎಂದು ಸಹನಾ ತಮ್ಮ ಮನದಾಳದ ಮಾತು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!