26.1 C
Gadag
Wednesday, October 4, 2023

ಪೊಲೀಸರ ಭರ್ಜರಿ ಬೇಟೆ: ಕಳೆದ ಹೋಗಿದ್ದ ವಸ್ತುಗಳು ಕೊನೆಗೂ ಕೈ ಸೇರಿದವು

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ವಾರಸುದಾರರಿಗೆ, ಕಳೆದು ಹೋಗಿದ್ದ ವಸ್ತುಗಳನ್ನು ವಾಪಸ್ ನೀಡುವ ಮೂಲಕ ನಗು ಕಮರಿದ್ದ ಮುಖದಲ್ಲಿ ಗದಗ ಜಿಲ್ಲಾ ಪೊಲೀಸರು ‌ಮಂದಹಾಸ ಮೂಡಿಸಿದ್ದಾರೆ.

ಯತೀಶ್ ಎನ್, ಗದಗ ಎಸ್ಪಿ

ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಬಂಗಾರ, ಬೆಳ್ಳಿ, ಹಣ, ವಾಹನ ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಗಳಿಗೆ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತು ಮತ್ತು ಆಭರಣಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಮರಳಿಸಿತು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 50 ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ಕಳ್ಳರಿಂದ ಒಟ್ಟು 39 ಲಕ್ಷ 24 ಸಾವಿರ ಮೌಲ್ಯದ ಚಿನ್ನಾಭರಣ, ನಗದು, ಬೈಕ್ ಸೇರಿದಂತೆ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಅದರಲ್ಲಿ 656 ಗ್ರಾಂ ಚಿನ್ನಾಭರಣ, 2 ಕೆಜಿ 265 ಗ್ರಾಂ ಬೆಳ್ಳಿ, 23 ಬೈಕ್ ಹಾಗೂ ನಾಲ್ಕು ವಾಹನಗಳ ಸೇರಿವೆ.

ಪ್ರಸಕ್ತ ಸಾಲಿನಲ್ಲಿ 50 ಸ್ವತ್ತು ಪ್ರಕರಣಗಳನ್ನು ಬೇಧಿಸಿದ್ದು, ಈ ವೇಳೆ ಜಪ್ತಿ ಮಾಡಿರುವ ಚಿನ್ನಾಭರಣಗಳನ್ನು ಫಲಾನುಭವಿಗಳಿಗೆ ಮರಳಿ ನೀಡಲಾಗಿದೆ. ಈ ವರ್ಷ ಸ್ವತ್ತು ಪ್ರಕರಣಗಳಲ್ಲಿ ಸರಾಸರಿ 56% ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಇನ್ನುಳಿದವುಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಇನ್ನೆರಡು ತಿಂಗಳಲ್ಲಿ ಇನ್ನುಳಿದ ಪ್ರಕರಣಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗುವುದು.

ಯತೀಶ್ ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಳ್ಳತನ ಆಗಿದ್ದ ಮನ್ಯಾಗಿದ್ದ ಬಂಗಾರ, ಬೆಳ್ಳಿ, ಹಣ ಹೋದ್ವು ಅಂತಾ ತಿಳ್ಕೊಂಡಿದ್ದಿವ್ರಿ. ಇದರಿಂದ ಬಹಳ ನೋವಾಗಿತ್ತು. ಆದ್ರೆ, ಇವತ್ತು ಮತ್ತೆ ನಮ್ಮ ಕೈ ಸೇರಿದ್ದು ತುಂಬಾ ಖುಷಿ ಆಗೈತಿ. ಪ್ರಕರಣ ಬೇಧಿಸುವ ಮೂಲಕ ಕಳೆದು ಹೋದ ಚಿನ್ನಾಭರಣ ಮರಳಿ ಕೊಡಿಸಿದ ಪೊಲೀಸ್ ಇಲಾಖೆಗೆ ಧನ್ಯವಾದಗಳು.

ಗಣೇಶ ಲಮಾಣಿ, ನಾಗಾವಿ ತಾಂಡಾ


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!