-ಅಪಘಾತದಿಂದಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ: ಸಂಬಂಧಿಕರ ಆರೋಪ
-ವ್ಯಕ್ತಿಯ ಆರೋಗ್ಯ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನ್ನುತ್ತಿವೆ ಆಸ್ಪತ್ರೆಯ ಮೂಲಗಳು
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬುಧವಾರ ರಾತ್ರಿ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಇಬ್ಬರನ್ನು ನಗರದ ಕೆ.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಓರ್ವನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರವಾಗಿ ತಲೆಗೆಗಾಯವಾಗಿದ್ದ ಫಕೀರಪ್ಪ (26)ನಿಗೆ ಕೆ.ಎಸ್.ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದರು. ಬೆಳಗ್ಗೆ ಫಕೀರಪ್ಪ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿರುವುದಾಗಿ ಸಂಬಂಧಿಕರು ಹೇಳಿದರು. ಸುಮಾರು ನಲವತ್ತು ಸಾವಿರ ರೂಪಾಯಿ ಪಾವತಿಸಿದ ನಂತರ ಫಕೀರಪ್ಪನನ್ನು ಸಂಬಂಧಿಕರ ಸುಪರ್ದಿಗೆ ಒಪ್ಪಿಸಿದರು. ಅಚ್ಚರಿ ಎಂದರೆ ಫಕೀರಪ್ಪ ಇನ್ನೂ ಉಸಿರಾಡುತ್ತಿದ್ದ. ಹಾಗಾಗಿ ಕೆ.ಎಸ್.ಆಸ್ಪತ್ರೆ ಸಿಬ್ಬಂದಿ ಜೊತೆ ಫಕೀರಪ್ಪನ ಕೆಲ ಸಂಬಂಧಿಕರು ವಾಗ್ವಾದ ನಡೆಸಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ರೋಗಿ ಬದುಕಿರುವುದು ಗೊತ್ತಾದ ನಂತರವೂ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲು ಆಸ್ಪತ್ರೆಯವರು ಆ್ಯಂಬುಲೆನ್ಸ್ ನೀಡದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಬದುಕಿದ್ದವನನ್ನೇ ಸಾಯಿಸಿದ ಈ ಆಸ್ಪತ್ರೆಯ ಸಿಬ್ಬಂದಿಗೆ ಮನುಷ್ಯತ್ವ ಎಲ್ಲಿಂದ ಬರಬೇಕು ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಫಕೀರಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸುಮಾರು ಒಂದು ಗಂಟೆಗಳ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಫಕೀರಪ್ಪ ಕೊನೆಯುಸಿರೆಳೆದ.
ಜೀವ ಇರುವಾಗಲೇ ಸಾವು ಎಂದು ಕೆ.ಎಸ್. ಆಸ್ಪತ್ರೆಯ ವೈದ್ಯರು ಹೇಳಿದ್ದರಿಂದ ಆಘಾತವಾಗಿದೆ. ಈ ಆಸ್ಪತ್ರೆಯಲ್ಲಿ ಇಂಥ ಪ್ರಕರಣ ಇದೊಂದೇ ಅಲ್ಲ, ಈ ಹಿಂದೆಯೂ ಇಂಥ ಪ್ರಕರಣಗಳು ನಡೆದಿವೆ. ಬಡವರ ಜೀವದ ಜೊತೆ ಚಲ್ಲಾಟ ಆಡುವ ಕೆ.ಎಸ್.ಆಸ್ಪತ್ರೆಯ ವೈದ್ಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಲಿ.
ರಮೇಶ್ ಕಲ್ಲತಾವರಗೆರೆ, ಮೃತನ ಮಾವ
ಬೆಳಗ್ಗೆ 9-30ಕ್ಕೆ ಬನ್ನಿ…
ಒಟ್ಟಾರೆ ಪ್ರಕರಣದ ಸತ್ಯಾಂಶ ತಿಳಿಯಲು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ಆಸ್ಪತ್ರೆಯ ಸಿಇಒ ಅನೌಪಚಾರಿಕವಾಗಿ ಪ್ರಕರಣದ ಹಿನ್ನೆಲೆ ತಿಳಿಸಿದರು. ಅಧಿಕೃತ ಮಾಹಿತಿಗೆ ಶುಕ್ರವಾರ ಬೆಳಗ್ಗೆ 9-30ಕ್ಕೆ ಬನ್ನಿ. ವೈದ್ಯರೇ ಪ್ರಕರಣದ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡುತ್ತಾರೆ ಎಂದರು.
ಗೊಂದಲಕ್ಕೆ ಕಾರಣವಾಯ್ತಾ “ಡೆತ್” ಎನ್ನುವ ಪದ..
ರೋಗಿಯ ವೈದ್ಯಕೀಯ ಸಲಹೆ ಮತ್ತು ಬಿಡುಗಡೆ ನಮೂನೆಯ ರೋಗಿಯ ವೈದ್ಯಕೀಯ ರಿಸ್ಕ್ ಎನ್ನುವ ಕಾಲಂನಲ್ಲಿದ್ದ “ಡೆತ್” ಎನ್ನುವ ಪದ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ರೋಗಿಯ ಕಂಡೀಷನ್ ವಿವರಿಸುವಾಗ ಸಾವು ಸಂಭವಿಸಬಹುದು ಎಂದು ಬರೆದಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಎಲ್ಲೂ ಸಹ ಸಾವು ಎಂದು ಡೀಕ್ಲೇರ್ ಮಾಡಿಲ್ಲ. ಬಹುಶಃ ನಮೂನೆ ಕನ್ನಡದಲ್ಲಿದ್ದು ವಿವರಣೆ ನೀಡಿದ್ದರೆ ಹೀಗಾಗುತ್ತಿರಲಿಲ್ಲವೇನೋ ಎಂದು ಪ್ರಕರಣವನ್ನು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಪರ ಮತ್ತು ವಿರುದ್ಧ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.