ವಿಜಯಸಾಕ್ಷಿ ಸುದ್ದಿ, ಗದಗ
ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪ ಮಾಡಿದ್ದಾರೆ.
ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ್ ಕರೂರ ಅವರ ಮನೆ ಮುಂದೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬಿಂಕದಕಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೇರ ಪೈಪೋಟಿ ಒಡ್ಡಿದ್ದೇ ಈ ಘಟನೆಗೆ ಪ್ರಮುಖ ಕಾರಣ ಎಂದು ಅನಿಲ ಆರೋಪಿಸಿದ್ದಾರೆ.
ಸ್ಥಳದಲ್ಲಿ ಗದಗ ಡಿವೈಎಸ್ಪಿ ಪ್ರಹ್ಲಾದ್ ಕೆ., ಗ್ರಾಮೀಣ ಠಾಣೆ ಸಿಪಿಐ ರವಿ ಕಪ್ಪತ್ತನವರ್, ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.
ಅಲ್ಲದೆ, ಸ್ಥಳದಲ್ಲಿ ಒಂದು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದ್ದು,ಗ್ರಾಮದಲ್ಲಿ ಪಥ ಸಂಚಲನ ನಡೆಸಲಾಗಿದೆ.
ಇನ್ನು ಈ ಕುರಿತು ಗ್ರಾಮೀಣ ಠಾಣೆ ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಅವರನ್ನು ಸಂಪರ್ಕಿಸಿದರೆ, ಯಾವುದೇ ಗೊಂದಲ ಗಲಾಟೆ ಇಲ್ಲವೆಂದಿದ್ದಾರೆ.
ಸದ್ಯ ಬಿಂಕದಕಟ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.