ಬುದ್ಧಿ ಕಲಿಯದ ಜನ, ಚಾಳಿ ಬಿಡದ ಪೊಲೀಸರು! ಇಷ್ಟೆಲ್ಲಾ ಜಾಗೃತಿ ಮೂಡಿಸಿದ್ದರೂ ಮಾಸ್ಕ್ ಇಲ್ಲದೇ ರಿಸ್ಕ್

0
Spread the love

ಬಿಯಸ್ಕೆ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಕೊಪ್ಪಳ: ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್-19 ಕಬಂಧಬಾಹು ಕೊಪ್ಪಳ ಜಿಲ್ಲೆಯಲ್ಲೂ ದಿನೇ ದಿನೇ ದೊಡ್ಡದಾಗುತ್ತಲೇ ಇದೆ. ಈಗಾಗಲೇ ವೈರಸ್‍ನ್ನು ನಿಯಂತ್ರಿಸುವ, ಹತೋಟಿಗೆ ತರುವ ಬಗೆ ಮತ್ತು ಕ್ರಮಗಳ ಕುರಿತು ಜಿಲ್ಲಾಡಳಿತ ಸಾಕಷ್ಟು ಜಾಗೃತಿ ಮೂಡಿಸಿದೆ. ಆದರೂ ಜನರು ಮನೆಯಿಂದ ಹೊರಬರುವಾಗ ಮಾಸ್ಕ್ ಇಲ್ಲದೇ ರಿಸ್ಕ್ ತೆಗೆದುಕೊಳ್ಳುವುದನ್ನು ಜಿಲ್ಲಾಡಳಿತ ಗಮನಿಸಿದೆ.

ಹಾಗಾಗಿ ಕಳೆದ ಒಂದು ವಾರದಿಂದ ಬುದ್ಧಿ ಕಲಿಯದ ಜನರಿಗೆ ಜಿಲ್ಲಾಡಳಿತ ದಂಡ ಪ್ರಯೋಗಕ್ಕೆ ಮುಂದಾಗಿದೆ. ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುವವರಿಗೆ ಕೊಪ್ಪಳ ಜಿಲ್ಲೆಯಲ್ಲಿ ದಂಡ ಗ್ಯಾರೆಂಟಿ. ಅಷ್ಟೇ ಏಕೆ ಹೊಟೇಲ್, ಪಾರ್ಕ್, ಸಂತೆ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಹರಟೆ ಹೊಡೆಯುವವರಿಗೂ ದಂಡ ಕಟ್ಟಿಟ್ಟ ಬುತ್ತಿ.

ಜಿಲ್ಲಾಡಳಿತದ ಈ ದಂಡ ಪ್ರಯೋಗ ಕೆಲ ಪೊಲೀಸರಿಗೆ ದಂಡಿಸುವ ಕ್ರಮವಾಗಿ ಪರಿಣಮಿಸಿದೆ. ಹೀಗೆಂದ ಮಾತ್ರಕ್ಕೆ ಪೊಲೀಸರು ದಂಡದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದರ್ಥವಲ್ಲ. ಕಳೆದ ಸುಮಾರು 6 ತಿಂಗಳಿನಿಂದ ದಬ್ಬಾಳಿಕೆಯಿಂದ ಬಹುತೇಕ ದೂರವಿದ್ದ ಪೊಲೀಸರಿಗೆ ದಂಡ ಪ್ರಯೋಗದ ಕೆಲಸದ ದರ್ಪದ ಅಸ್ತ್ರವಾಗಿರುವುದಂತು ಸತ್ಯ.

ಗಾಡಿ ನಿಲ್ಲಿಸಿ ಕೀ ಕಿತ್ತುಕೊಳ್ಳುತ್ತಾರೆ

ದಂಡ ಪ್ರಯೋಗದ ಕೆಲಸದಲ್ಲಿ ಪೊಲೀಸರ ಜೊತೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸಹ ಕೈ ಜೋಡಿಸಿದ್ದಾರೆ. ಕೊಪ್ಪಳದ ಜೆಪಿ ಮಾರುಕಟ್ಟೆ, ಗಂಜ್ ಸರ್ಕಲ್, ಅಶೋಕ ಸರ್ಕಲ್ ಸೇರಿದಂತೆ ಬೆಳಗಿನಿಂದ ಸಂಜೆವರೆಗೆ ಮಾಸ್ಕ್ ಇಲ್ಲದ ಮುಖಗಳ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣು ಬೀಳುತ್ತಲೇ ಇರುತ್ತದೆ.
ವಾಹನ ಸವಾರರು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದರೆ ಗಾಡಿಯನ್ನು ಅಡ್ಡಗಟ್ಟುತ್ತಾರೆ. ಜೊತೆಗೆ ಮೊದಲು ವಾಹನದ ಕೀ ಕಿತ್ತುಕೊಳ್ಳುತ್ತಾರೆ. ದಂಡ ಕಟ್ಟಿ ಕೀ ಪಡೆಯಿರಿ, ಇಲ್ಲವೇ ಕ್ವಾರಂಟೈನ್ ಕೇಂದ್ರಕ್ಕೆ ನಡೆಯಿರಿ ಎಂದು ದಬಾಯಿಸುವುದಲ್ಲದೇ ಥೇಟ್ ಜನರನ್ನು ಪಶುಗಳಂತೆ ಕಾಣುತ್ತಾರೆ. ಈ ಸಂಬಂಧ ನಿತ್ಯ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಇದ್ದದ್ದೇ. ಸಾರ್ವಜನಿಕರು ಕಾನೂನು ಪ್ರಕಾರ ಕೀ ಕಿತ್ತುಕೊಳ್ಳುವ ಹಾಗಿಲ್ಲ ಎಂದರೆ ಮಾಸ್ಕ್ ಇಲ್ಲದ್ದಕ್ಕೆ ದಂಡದ ಜೊತೆಗೆ ಮತ್ತೇ ಮತ್ತೊಂದೆರಡು ಮೂರು ಪ್ರಕರಣ ಸೇರಿಸಿ ಜೇಬಿಗೆ ತೂತು ಗ್ಯಾರಂಟಿ. ಇಲ್ಲವಾದರೆ ಹತ್ತಿ ಜೀಪ್, ನಡೆಯಿರಿ ಕ್ವಾರಂಟೈನ್‍ಗೆ ಎಂಬ ದರ್ಪ.

ಕೊವಿಡ್-19 ನಿಯಂತ್ರಣದ ಹೆಸರಿನಲ್ಲಿ ಅಧಿಕಾರಿಗಳ ದರ್ಪ ಬೇಕಿಲ್ಲ. ಹಾಗಂತ ಸಾರ್ವಜನಿಕರು ಸಹ ಜಿಲ್ಲಾಡಳಿತದ ಈ ಕ್ರಮ ಯಾರ ಸಲುವಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರಕಾರದ ಸದ್ಯದ ನಿಯಮಾವಳಿ ಪ್ರಕಾರ ಮಾಸ್ಕ್ ಬಳಕೆ ಕಡ್ಡಾಯ. ಎಲ್ಲರೂ ಅದನ್ನು ಪಾಲಿಸಬೇಕು. ಪೊಲೀಸರು ಸಹ ಮನುಷ್ಯರೇ. ಮನುಷ್ಯರ ಜೊತೆ ಮನುಷ್ಯರಂತೆ ವರ್ತಿಸಲಿ ಎಂಬುದಷ್ಟೇ ನಮ್ಮ ಆಶಯ.

ಮಾಸ್ಕ್ ಜೊತೆಗಿತ್ತು. ಮಾರ್ಕೆಟ್‍ಗೆ ಬೈಕ್ ಮೇಲೆ ಹೋಗುವಾಗ ಫೋನ್ ಬಂದಿದ್ದಕ್ಕೆ ಗಾಡಿ ಪಕ್ಕಕ್ಕೆ ನಿಲ್ಲಿಸಿ ಮಾಸ್ಕ್ ತೆಗೆದು ಮಾತನಾಡಿದೆ. ಆನಂತರ ಮಾರುಕಟ್ಟೆಗೆ ಹೋಗಬೇಕಾದ ಜೇಬಿನಲ್ಲಿದ್ದ ಮಾಸ್ಕ್ ಹಾಕುವುದನ್ನು ಮರೆತುಬಿಟ್ಟೆ. ಅದಕ್ಕೆ ದಂಡ ಹಾಕುವುದಾದರೆ ಹಾಕಲಿ. ದಂಡ ಕಟ್ಟಲೂ ಸಿದ್ಧವಿದ್ದರೂ ಏಕಾಏಕಿ ನಾವೇನೋ ಮಹಾಪರಾಧ ಮಾಡಿದ್ದೇವೆಯೇನೋ ಎಂಬಂತೆ ಗಾಡಿ ಕೀ ಕಿತ್ತುಕೊಳ್ಳುವುದು ಸರಿಯಲ್ಲ. ಜೊತೆಗೆ ದಂಡ ಕಟ್ಟಿದ ಮೇಲೆ ಕೀ ಮರಳಿಸಲು ಪೊಲೀಸರು, ಅಧಿಕಾರಿಗಳು ಸತಾಯಿಸ್ತಾರೆ.

-ಸಿದ್ಧಲಿಂಗೇಶ್, ಕೊಪ್ಪಳ.

ದಂಡ ಹಾಕುತ್ತಿರುವುದು ಜನರು ಮಾಸ್ಕ್ ಹಾಕುವುದನ್ನು ಮರೆಯದಿರಲಿ ಎಂಬುದಕ್ಕೆ. ಆದರೆ ಸಾರ್ವಜನಿಕರ ವಾಹನಗಳ ಕೀ ಕಿತ್ತುಕೊಳ್ಳುವುದು ಸರಿಯಲ್ಲ. ಆ ರೀತಿ ಮಾಡದಿರುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು.

-ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ, ಕೊಪ್ಪಳ.


Spread the love

LEAVE A REPLY

Please enter your comment!
Please enter your name here