ಬೆಂಕಿಯುಂಡೆಯಾದ ಶಾಸಕ ಬಂಡಿ: ಬೆವರಿದ ಇಒ, ಪಿಡಿಒಗಳು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ನರೇಗಾ ವೇತನ ಪಾವತಿಗೆ ಮೀನಮೇಷ ಮಾಡುವ, ಪಂಚಾಯತಿಗೆ ಸರಿಯಾಗಿ ಕರ್ತವ್ಯಕ್ಕೆ ಬಾರದ, ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಒಗಳ ವಿರುದ್ಧ ಕ್ರಮಕ್ಕೆ ಗ್ರಾಪಂ ಆಡಳಿತಾಧಿಕಾರಿಗಳು  ವರದಿ ನೀಡಿ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ತಾಲೂಕಾ ಪಂಚಾಯತಿಯಲ್ಲಿ ನಡೆದ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರ ಆಕ್ರೋಶಕ್ಕೆ ತಪ್ಪು  ಮಾಡಿದ ಪಿಡಿಒ, ಆಡಳಿತಾಧಿಕಾರಿ ಮತ್ತು ಇಒಗಳು ಬೆವರಿ ಹೋದರು.
 
ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳು ಸರಿಯಾಗಿ ಬರುತ್ತಿಲ್ಲ ಎನ್ನುವ ದೂರುಗಳಿವೆ. ಅಲ್ಲದೆ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಸ್ಥರು ದೂರವಾಣಿ ಮೂಲಕ ಪಿಡಿಒಗಳ ಸಂಪರ್ಕಿಸಲು ಪ್ರಯತ್ನಿಸಿದರೆ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಪಿಡಿಒಗಳ ಕಣ್ಣಾಮುಚ್ಚಾಲೆ ಆಟ ತಾ.ಪಂ ಕಾರ್ಯ ನಿರ್ವಾಹಕರಿಗೆ ಹಾಗೂ ಗ್ರಾ.ಪಂ ಆಡಳಿತಾಧಿಕಾರಿಗಳಿಗೆ ಕಾಣುತ್ತಿಲ್ಲವೆ ಎಂದು ಆಕ್ರೋಶಗೊಂಡರು.

ಸಭೆಯಲ್ಲಿ ಇದ್ದ ತಾ.ಪಂ  ಇಒ ಸಂತೋಷಕುಮಾರ ಪಾಟೀಲ, ‘ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಪಿಡಿಒಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ’ ಎಂದು ಉತ್ತರಿಸಿದರು. ಇದಕ್ಕೆ  ಮತ್ತೆ  ಆಕ್ರೋಶಗೊಂಡ ಶಾಸಕ ಕಳಕಪ್ಪ ಬಂಡಿ, ನೋಟಿಸ್ ನೀಡಿ ಸುಮ್ಮನಾಗುವುದಲ್ಲ, ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಗಮನ ನೀಡದ ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾ.ಪಂ ಇಒಗೆ ಎಚ್ಚರಿಸಿದರು.
 
ಸರ್ಕಾರದ ಯೋಜನೆಗಳು ಸಕಾಲದಲ್ಲಿ ಗ್ರಾಮಸ್ಥರಿಗೆ ತಲುಪಬೇಕು  ಎನ್ನುವ ಉದ್ದೇಶದಿಂದ ಗ್ರಾ.ಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಆರಂಭಿಸಲು ಸರ್ಕಾರ ಆದೇಶಿಸಿದೆ. ಆದರೆ ಕೆಲವು ಗ್ರಾ.ಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಆರಂಭವಾಗಿಲ್ಲ. ಹೀಗಾಗಿ 7 ದಿನಗಳಲ್ಲಿ ಕಡ್ಡಾಯವಾಗಿ ಸೇವಾ ಕೇಂದ್ರಗಳನ್ನು ಆರಂಭಿಸಲು ಪಿಡಿಒಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.

ತಾ.ಪಂ ಇಒ ಸಂತೋಷಕುಮಾರ ಪಾಟೀಲ ಸೇರಿ 31 ಗ್ರಾ.ಪಂ ಪಿಡಿಒಗಳು, ಆಡಳಿತಾಧಿಕಾರಿಗಳು ಇದ್ದರು.

‘ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ. ಪಿಡಿಒಗಳು 10 ದಿನದಲ್ಲಿ ರಸ್ತೆಗಳ  ದುರಸ್ತಿಗೆ ಅಗತ್ಯ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿ.ಪಂ ಸಿಒಇ ಅವರಿಗೆ ತಲುಪಿಸಬೇಕು.

-ಕಳಕಪ್ಪ ಬಂಡಿ, ಶಾಸಕರು

Spread the love

LEAVE A REPLY

Please enter your comment!
Please enter your name here