25.7 C
Gadag
Wednesday, June 7, 2023

ಬೆಳವಣಕಿ ಗ್ರಾಪಂ ‘ಕಮ್ಯೂನಿಸ್ಟ್’ ಪಕ್ಷದ ಪಾಲು: ಸಿಪಿಐ(ಎಂ), ಕಾಂಗ್ರೆಸ್ ಪಕ್ಷಗಳ ಮೈತ್ರಿ

Spread the love

ಎರಡನೇ ಬಾರಿಗೆ ಸಿಪಿಐ(ಎಂ)ಗೆ ಅಧಿಕಾರಕಳಕವ್ವ ಮೈಲಾರಪ್ಪ ಮಾದರಗೆ ಅಧ್ಯಕ್ಷ ಪಟ್ಟ?

ವಿಜಯಸಾಕ್ಷಿ ಸುದ್ದಿ, ಗದಗ

ಪ್ರಮುಖ ರಾಜಕೀಯ ಪಕ್ಷಗಳ ಭರಾಟೆಯ ನಡುವೆಯೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಲ್ಲದೆ, ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಲಿದ್ದಾರೆ.

ರೋಣ ತಾಲೂಕಿನ ಬೆಳವಣಕಿ ಸ್ವತಂತ್ರ ಗ್ರಾಮ ಪಂಚಾಯತಿಯಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಸದಸ್ಯರು ಜಯಭೇರಿ ಬಾರಿಸಿದ್ದಾರೆ. ಬೆಳವಣಕಿ ಗ್ರಾಪಂನಲ್ಲಿ ಆರು ವಾರ್ಡ್‌ಗಳಿದ್ದು, 13 ಸದಸ್ಯ ಬಲ ಹೊಂದಿದೆ. ಇದರಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಗೆಲುವು ಸಾಧಿಸಿದ್ದು, ಹುಬ್ಬೇರುವಂತೆ ಮಾಡಿದೆ. ಇನ್ನುಳಿದ 9 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ತಲಾ ನಾಲ್ಕು ಸದಸ್ಯರು ವಿಜೇತರಾಗಿದ್ದಾರೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಬೆಳವಣಕಿ ಗ್ರಾ.ಪಂ. ಅಧ್ಯಕ್ಷ ಪಟ್ಟ ದಕ್ಕಬೇಕಾದರೆ 8 ಸದಸ್ಯರ ಬೆಂಬಲ ಇರಬೇಕು. ಆದರೆ, ಇಲ್ಲಿನ ಜನರು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. ಸಿಪಿಐ(ಎಂ), ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಬೆಳವಣಕಿಯಲ್ಲಿ ಸಮಬಲ ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿವೆ.

ಸಿಪಿಐ(ಎಂ), ಕಾಂಗ್ರೆಸ್ ಮೈತ್ರಿ:

ಬಿಜೆಪಿಗೆ ಬೆಳವಣಕಿ ಪಟ್ಟ ಬಿಟ್ಟು ಕೊಡಬಾರದೆಂಬ ಕಾರಣಕ್ಕೆ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿವೆ. ಒಂದು ಸುತ್ತಿನ ಮಾತುಕತೆ ನಡೆಸಿವೆ. ಸಿಪಿಐಎಂಗೆ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲು ಒಪ್ಪಂದ ಮಾಡಿಕೊಂಡಿವೆ. ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ತಮ್ಮ ಸದಸ್ಯರನ್ನು ಭದ್ರವಾಗಿಟ್ಟುಕೊಂಡಿವೆ. ಓರ್ವ ಪಕ್ಷೇತರ ಸದಸ್ಯರನ್ನೂ ಸೆಳೆದುಕೊಳ್ಳಲು ಚಿಂತನೆ ನಡೆದಿದೆ. ಇತ್ತ ಬಿಜೆಪಿಯೂ ಓಲೈಕೆಯ ನೀತಿ ಅನುಸರಿಸುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮೀಸಲು:

ಬೆಳವಣಕಿ ಗ್ರಾ.ಪಂ.ಗೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಮೀಸಲಾತಿ ಬಂದಿದೆ. ಒಪ್ಪಂದದಂತೆ ಫೆ. 4ರಂದು ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ ಕಳಕವ್ವ ಮೈಲಾರಪ್ಪ ಮಾದರ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತವಾಗಿದೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಹಾಗಾಗಿ, ಅದು ಗೌಪ್ಯವಾಗಿಯೇ ಉಳಿದಿದೆ.

ಕಳಕವ್ವ ಮಾದರ

ಸಿಪಿಐ(ಎಂ) ಪಾರದರ್ಶಕ ಆಡಳಿತ:

2010ರಲ್ಲೂ ಭಾರತೀಯ ಕಮ್ಯೂನಿಸ್ಟ್ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಎರಡೂವರೆ ವರ್ಷ ಅಧಿಕಾರ ನಡೆಸಿತ್ತು. 7 ಸದಸ್ಯರನ್ನೊಳಗೊಂಡಿದ್ದ ಸಿಪಿಐ(ಎಂ) ಪಕ್ಷವನ್ನು ಕೌಜಗೇರಿ ಗ್ರಾಮದ ಮೂವರು ಪಕ್ಷೇತರ ಸದಸ್ಯರು ಬೆಂಬಲಿಸಿದ್ದರು. ಅಲ್ಪಾವಧಿಯಲ್ಲೇ ಪಾರದರ್ಶಕ ಆಡಳಿತ ನಡೆಸಿತ್ತು. ಕಾಲಕಾಲಕ್ಕೆ ವಾರ್ಡ್ ಹಾಗೂ ಗ್ರಾಮ ಸಭೆ ನಡೆಸಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಬಡವರಿಗೆ ಮನೆ ನಿವೇಶನ, ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿತ್ತು.

ರಾಜ್ಯದಲ್ಲಿಯೇ ಪ್ರಥಮ

ಬೆಳವಣಕಿಯಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಸದಸ್ಯರು ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಭಾರತದ ಕಮ್ಯೂನಿಸ್ಟ್ ಪಕ್ಷ ಗದಗ ಜಿಲ್ಲೆಯಲ್ಲಿ ಮಾತ್ರ ಅಧಿಕಾರ ಹಿಡಿಯುತ್ತಿರುವುದು ವಿಶೇಷ. 1ನೇ ವಾರ್ಡ್‌ನ ಸಿಪಿಐ(ಎಂ) ಬೆಂಬಲಿತ ಸದಸ್ಯ ಬಸವರಾಜ ವೀರಪ್ಪ ಮಂತೂರ ಸತತ ನಾಲ್ಕನೇ ಬಾರಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರೆ, 2ನೇ ವಾರ್ಡ್‌ನ ಸುವರ್ಣ ಮಾರುತಿ ಶಗಣಿ ಅವರು ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಅದರಂತೆ, ಸಿಪಿಐ(ಎಂ) ಬೆಂಬಲಿತ ಇನ್ನಿಬ್ಬರು ಗ್ರಾಪಂ ಸದಸ್ಯರಾದ ರೇಣುಕಾ ಕರಿಯಪ್ಪ ಕರ್ಕಿಕಟ್ಟಿ ಹಾಗೂ ಬೆಳವಣಕಿ ಗ್ರಾಪಂನ ಸಂಭಾವ್ಯ ಅಧ್ಯಕ್ಷೆ ಕಳಕವ್ವ ಮೈಲಾರಪ್ಪ ಮಾದರ ಸೇರಿ ನಾಲ್ವರು ಸದಸ್ಯರು ಆಯ್ಕೆಯಾಗಿದ್ದಾರೆ.

ಜನಪರ ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಮಹಿಳೆಯರಿಗೆ ಸೂಕ್ತ ಶೌಚಾಲಯ ನಿರ್ಮಿಸಲಾಗುವುದು. ಗ್ರಾಮದ ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಬಸವರಾಜ್ ಮಂತೂರ, ಗ್ರಾ.ಪಂ ಸದಸ್ಯರು, ಬೆಳವಣಕಿ

Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Posts