ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿ ವಿವರವನ್ನು ಸಂಬಂಧಿತ ಇಲಾಖೆಗಳು ಮುತುವರ್ಜಿಯಿಂದ ವಹಿಸಿ ದಾಖಲೀಕರಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಹಾನಿಗೊಳಗಾದ ಬೆಳೆಯ ವಿವರವನ್ನು ಸಂಬಂಧಿಸಿದ ಇಲಾಖೆಗೆ ಒದಗಿಸಲು ತಿಳಿಸಿದರು. ಪರಿಹಾರ ತಂತ್ರಾಂಶದ ದಾಖಲಿಕರಣಕ್ಕೆ ಸಂಬಂಧಿಸಿದ ಅಡಚಣೆಗಳನ್ನು ಕೂಡಲೇ ನಿವಾರಿಸಿ ದಾಖಲೀಕರಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಯಾವುದೇ ನೆಪ ಒಡ್ಡಿ ವಿಳಂಭವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವದು ಎಂದು ತಿಳಿಸಿದರು. ಈ ಕಾರ್ಯವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಬೆಳೆ ವಿಮೆ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿಗಳು ವಿಮಾ ಪಾವತಿಯ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ರೈತರು ಬೆಳೆ ವಿಮೆಗೆ ಒಳಪಡುವಂತೆ ಜಾಗೃತಿ ಮೂಡಿಸಬೇಕು. ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಮರ್ಪಕ ದಾಸ್ತಾನು ಹೊಂದಿದ್ದು ಈ ವಿಷಯದಲ್ಲಿ ಯಾವುದೇ ಅನಾನೂಕುಲವಾಗದಂತೆ ವಿತರಿಸಲು ಸೂಚಿಸಿದರು. ರೈತರ ಬಿತ್ತನೆ ಮಾಡುವ ಪೂರ್ವದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಹಾಗೂ ಬೆಳೆಗಳಿಗೆ ಬರಬಹುದಾಂತಹ ರೋಗಗಳ ಕುರಿತು ಅಗತ್ಯದ ತಿಳುವಳಿಕೆ ನೀಡಬೇಕು.
ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ಮನೆಗಳ ಸಂಪೂರ್ಣ ವಿವರ ಪಡೆದು ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಶೀಘ್ರವೇ ವಿತರಿಸಿ ವರದಿ ನೀಡುವಂತೆ ತಿಳಿಸಿದ ಅವರು ಮಳೆ ಹಾಗೂ ಪ್ರವಾಹದಿಂದಾಗಿ ಜನ ಜಾನುವಾರು ಪ್ರಾಣ ಹಾನಿಗೆ ಪರಿಹಾರ ಒದಗಿಸಿದರ ಕುರಿತು ಮಾಹಿತಿ ಪಡೆದರು.
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ಈ ಕುರಿತು ಎಲ್ಲ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಲು ತಿಳಿಸಿದರು. ಜನ ಸಂಚಾರ ಹೆಚ್ಚಾಗಿರುವ ಪ್ರದೇಶಗಳ ರಸ್ತೆ ದುರಸ್ತಿಗೆ ಪ್ರಥಮಾದ್ಯತೆ ನೀಡಿ ನಂತರ ಉಳಿದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿರಂತರ ನಿಗಾವಹಿಸಿ ವರದಿ ನೀಡಬೇಕು. ಇದಕ್ಕಾಗಿ ನಿಯಮಿಸಲಾದ ಅಧಿಕಾರಿಗಳು ಗೃಹದಿಗ್ಬಂಧನದಲ್ಲಿರುವವರ ಮನೆಗೆ ನಿಯಮಿತವಾಗಿ ಬೇಟಿ ನೀಡಿ ನಿಗದಿತ ಸಮಯದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಬಾಗಾಧಿಕಾರಿ ರಾಯಪ್ಪ ಹುಣಸಗಿ, ಎಲ್ಲ ತಹಶೀಲ್ದಾರರು, ಕೃಷಿ ಹಾಗೂ ತೊಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬೆಳೆ ಹಾನಿ ವಿವರ ದಾಖಲೀಕರಣ ಶೀಘ್ರ ಪೂರ್ಣಗೊಳಿಸಿ: ಸುಂದರೇಶ್ ಬಾಬು
Advertisement